Sunday 1 December 2019

ಏಕರೂಪ ನಾಗರಿಕ ಸಂಹಿತೆ


“ವೇಷ ಬೇರೆ, ಭಾಷೆ ಬೇರೆ ದೇಶವೊಂದೇ ಭಾರತ ಒಂದೇ ತಾಯಿ ಮಕ್ಕಳೆಂದು ಘೋಷಿಸೋಣ ಸಂತತ”
- “ಸಾ. ಶಿ. ಮರುಳಯ್ಯ.”


          ಏಕರೂಪದ ನಾಗರಿಕ ಸಂಹಿತೆ ಎಂದರೆ, ಭಾರತದ ಎಲ್ಲ ವ್ಯಕ್ತಿಗಳಿಗೆ, ಅವರ ಧರ್ಮ ಮತ್ತು ಜಾತಿಗಳ ವ್ಯತ್ಯಾಸಗಳನ್ನು ಪರಿಗಣಿಸದೆ, ವಿವಾಹ, ವಿಚ್ಚೇದನೆ, ಉತ್ತರಾಧಿಕಾರ, ವಾರಸು ಮತ್ತು ಜೀವನಾಂಶಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ಅನ್ವಯವಾಗುವ ಒಂದು ಕ್ರೋಢೀಕರಿಸಿದ ಕಾನೂನು.

          “ವಿಭಿನ್ನ ವಿಶ್ವಾಸ ಮತ್ತು ಧರ್ಮಗಳ ಜನರನ್ನು ಒಂದು ಸಾಮಾನ್ಯ ವೇದಿಕೆಯ ಮೇಲೆ ತರುವುದರಲ್ಲಿರುವ ಸಮಸ್ಯೆಗಳ ಅರಿವು ನಮ್ಮೆಲ್ಲರಿಗೂ ಇದೆ. ಆದರೂ ಸಂವಿಧಾನ ಅರ್ಥಪೂರ್ಣವಾಗಬೇಕಾದರೆ ವಿಭಿನ್ನ ವಿಶ್ವಾಸ ಮತ್ತು ಧರ್ಮಗಳ ಜನರನ್ನು ಒಗ್ಗೂಡಿಸುವ ಪ್ರಯತ್ನ ಎಂದಾದರೊಂದು ದಿನ ಪ್ರಾರಂಭವಾಗಲೇಬೇಕು” ಆ ಸುದಿನ ಈಗ ಬಂದಿದೆ.

          ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಹಲವು ಮತಗಳ, ಪ್ರದೇಶಗಳ ನಾಗರಿಕ ಕಾನೂನುಗಳನ್ನು ಏಕರೂಪದಲ್ಲಿ ತರುವ ಮೂಲಕ ಆಡಳಿತ ಮಾಡುವ ಕಾನೂನಾಗಿದೆ. ಹಲವು ಧರ್ಮ ಅಥವಾ ಜನಾಂಗೀಯ ವ್ಯಕ್ತಿಗಳು ಹೊಂದಿರುವ ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸುತ್ತದೆ. ಏಕರೂಪ ನಾಗರಿಕ ಸಂಹಿತೆ ಸಾಮಾನ್ಯವಾಗಿ ಈ ಕೆಳಗಿನವುಗಳಿಗೆ ಸಂಬಂಧಿಸಿದೆ.

1. ವೈಯಕ್ತಿಕ ಸ್ಥಾನಮಾನ
2. ಆಸ್ತಿ ಹೊಂದುವ, ಸ್ವಾಧೀನ ಮಾಡಿಕೊಳ್ಳುವುದನ್ನು ಒಳಗೊಂಡಿದೆ.
3.ವಿವಾಹ ವಿಚ್ಛೇದನ ಮತ್ತು ದತ್ತು ಸ್ವೀಕಾರ ಕುರಿತಾಗಿದೆ.


ಏಕರೂಪ ನಾಗರಿಕ ಸಂಹಿತೆಯ ಮೂಲ

          ಏಕರೂಪ ನಾಗರಿಕ ಸಂಹಿತೆಯು ಇಂದು ನಿನ್ನೆಯ ಕಲ್ಪನೆಯಲ್ಲ. ಸಂವಿಧಾನ ರಚನಾಕಾರರು ವಿಧಿ 44 ರಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. ವಿಧಿ 44 ಭಾರತದಾದ್ಯಂತ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೆಗೊಳಿಸಲು ರಾಜ್ಯಕ್ಕೆ ನಿರ್ದೇಶನ ನೀಡುತ್ತದೆ. ಆದರೆ 1950 ರಲ್ಲಿ ಜವಾಹರಲಾಲ್ ನೆಹರೂ ನೇತೃತ್ವದ ಸರ್ಕಾರ ಹಲವು ಕಾಯ್ದೆಗಳನ್ನು ರೂಪಿಸಿ, ಹಿಂದೂ ವೈಯಕ್ತಿಕ ಕಾನೂನುಗಳಿಗೆ ಏಕರೂಪ ನೀಡಿತು. ಹಿಂದೂ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಸಂಧರ್ಭದಲ್ಲಿ ಪ್ರಧಾನಿ ನೆಹರೂ ಅವರು, ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಕಾಲ ಇನ್ನೂ ಪಕ್ವವಾಗಿಲ್ಲ ಎಂದಿದ್ದರು.


ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಸ್ತುತ ಚರ್ಚೆ

          ಕಳೆದ ಕೆಲವು ವರ್ಷಗಳಿಂದ ಏಕರೂಪ ನಾಗರಿಕ ಸಂಹಿತೆ, ಮುಸ್ಲಿಂ ವೈಯಕ್ತಿಕ ಕಾನೂನು, ಒಂದೇ ಉಸಿರಿನಲ್ಲಿ ಹೇಳುವ ಮೂರು ತಲಾಖ್‌ಗಳ ಸಿಂಧುತ್ವದ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಏಕರೂಪ ಸಂಹಿತೆ ಬೇಕು ಅಥವಾ ಬೇಡ ಎಂದು ಯಾರಾದರೂ ಹೇಳುವುದಕ್ಕೆ ಮುಖ್ಯವಾಗಿ ಬೇಕಿರುವುದು ಇಂಥದ್ದೊಂದು ಸಂಹಿತೆಯ ಕರಡು, ಕಾನೂನು ಆಯೋಗವಾಗಲಿ, ಸರ್ಕಾರವಾಗಲಿ ಇನ್ನೂ ಅದನ್ನು ರೂಪಿಸಿಲ್ಲ ಹಾಗಾಗಿ ಅದರ ಒಳಿತು ಮತ್ತು ಕೆಡುಕಿನ ಬಗ್ಗೆ ಚರ್ಚಿಸುವುದರಲ್ಲಿ ಯಾವುದೇ ಹುರುಳಿಲ್ಲ ಇದರಿಂದಾಗುವ ಅನುಕೂಲ, ಜಾರಿಗೆ ಬರುವುದರಿಂದಾಗುವ ಅನಾನುಕೂಲಗಳನ್ನು ಗುರುತಿಸಬಹುದು ಅಷ್ಟೆ!


ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಆಗುವ ಅನುಕೂಲ ಹಾಗೂ  ಅನುಕೂಲಗಳು :

1. ಸಮಾನತೆಯ ಸಾಧನ : ಭಾರತದ ಸಂವಿಧಾನದ ವಿಧಿ 14 “ಭಾರತದ ರಾಜ್ಯ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿಗೆ ಕಾನೂನಿನ ಮುಂದೆ ಸಮಾನತೆಯನ್ನು ಅಥವಾ ಕಾನೂನಿನಿಂದ ಸಮಾನ ರಕ್ಷಣೆಯನ್ನು ನಿರಾಕರಿಸಲಾಗದು” ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ ದೇಶದಲ್ಲಿ ವಿವಾಹ, ವಿಚ್ಛೇದನ, ದತ್ತು ಸ್ವೀಕಾರ, ಆಸ್ತಿಯನ್ನು ಹೊಂದುವ, ಪರಬಾರ ಮಾಡುವ ಕುರಿತು ಬೇರೆ ಬೇರೆ ಧರ್ಮಗಳಲ್ಲಿ ಅವರದೇ ಆದ ವೈಯಕ್ತಿಕ ಕಾನೂನುಗಳಿವೆ. ಈ ವೈಯಕ್ತಿಕ ಕಾನೂನುಗಳು ಏಕರೂಪದಲ್ಲಿ ಇಲ್ಲ. ಇದರಿಂದ “ಕಾನೂನಿನ ಮುಂದೆ ಸಮಾನತೆ” ಎಂಬ ಸಂವಿಧಾನದ ಆಶಯಕ್ಕೆ ಧಕ್ಕೆ ಬರುತ್ತಿದೆ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ನೈಜವಾದ ಸಮಾನತೆ ಬರುವಲ್ಲಿ ಸಂಶಯವಿಲ್ಲ.


2. ಲಿಂಗ ಸಮಾನತೆಯ ಸಾಧನ : ಹೆಣ್ಣು ಮತ್ತು ಗಂಡು ಎಂಬೆರಡು ಒಂದೇ ನಾಣ್ಯದ ಎರಡು ಮುಖಗಳಿಗೆ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ಸ್ಥಾನಮಾನ ನೀಡಲಾಗಿದೆ. ಇದು ಸಮಾನತೆಯ ಸಾಧನೆಯ ಸಾಕಾರಕ್ಕೆ ತೊಡಕಾಗಿದೆ. ಒಂದು ಧರ್ಮದಲ್ಲಿ ಏಕಪತ್ನಿತ್ವಕ್ಕೆ ಅವಕಾಶವಿದೆ. ಕೆಲವೊಂದು ಧರ್ಮದಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ನೀಡಲಾಗಿದೆ ಸಮಾನವಾಗಿ ಹುಟ್ಟಿದ ಮಹಿಳೆಯನ್ನು ಅಸಮನಾಗಿ ನೋಡುವುದು ನ್ಯಾಯವೇ? ಖಂಡಿತ ಅಲ್ಲ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಅಂಗ ಸಮಾನತೆ ಬರುತ್ತದೆ. ವಿಶ್ವ ಅಂಗಸಮಾನತೆ ಸೂಚ್ಯಂಕದಲ್ಲಿ ಭಾರತದ ಸ್ಥಾನ ಉತ್ತಮವಾಗುವ ಮೂಲಕ ಜಾಗತಿಕವಾಗಿ ಭಾರತ ಮುನ್ನಣೆ ಪಡೆಯುತ್ತದೆ.


3. ರಾಷ್ಟ್ರೀಯ ಐಕ್ಯತೆಯ ಸಾಧನ : ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ, ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಐಕ್ಯತೆ ಎಂಬ ಶಬ್ದವು ಇದೆ. ನೈಜವಾದ ಏಕತೆ ಸಾಧ್ಯವಾಗುವುದು ದೇಶದ ಎಲ್ಲ ಸಮುದಾಯ, ಎಲ್ಲ ಜನರಿಗೂ ಏಕರೂಪದ ಕಾನೂನುಗಳನ್ನು ತರುವ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ಸಾಧನೆ ಮಾಡಬಹುದಾಗಿದೆ.


4. ಏಕರೂಪ ನಾಗರಿಕ ಸಂಹಿತೆ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಸಾಧನ:
ಈ ದೇಶದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಅವರದೇ ಕಾನೂನುಗಳು ಅವರಿಗೆ ಅನುಕೂಲಕ್ಕಿಂತ, ಅನಾನುಕೂಲಗಳೇ ಉಂಟು ಮಾಡುವ ಕಾನೂನುಗಳಿವೆ. ಇದರ ಭವ್ಯ ಭಾರತದ ಮುಖ್ಯ ವಾಹಿನಿಗೆ ಆ ಅಲ್ಪಸಂಖ್ಯಾತ ಸಮುದಾಯದ ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ : ಅಲ್ಪಸಂಖ್ಯಾತ ಸಮುದಾಯಗಳನ್ನು ದೇಶದ/ಸಮಾಜದ ಮುಖ್ಯವಾಹಿನಿಗೆ ತರಬಹುದಾಗಿದೆ.


 5. ಜನಾಂಗೀಯ ಸಾಮರಸ್ಯ ತರುವ ಸಾಧನ: ಒಂದೇ ದೇಶದಲ್ಲಿ, ಒಂದೇ ರಾಜ್ಯದಲ್ಲಿ ಹುಟ್ಟಿದ ನಾವು, ಒಂದೇ ರೀತಿಯ ಮೈಬಣ್ಣ, ಒಂದೇ ರೀತಿ ದೇಹ ರಚನೆ ಹೊಂದಿದ್ದೇವೆ. ಒಂದೇ ನೀರು, ವಾಯು ಸ್ವೀಕರಿಸುತ್ತಿರುವ ನಾವು ಮತ್ತು ನಮ್ಮನ್ನು ಬೇರೆ ಬೇರೆ ಕಾನೂನುಗಳು ಆಳುತ್ತಿವೆ. ಇದು ಅಸಮಂಜಸ ಮತ್ತು ಒಂದು ಕಣ್ಣಿಗೆ ಬೆಣ್ಣೆ ಮತ್ತು ಒಂದು ಕಣ್ಣಿಗೆ ಸುಣ್ಣ” ಎಂಬ ನಾಣ್ಣುಡಿಗೆ ಹೇಳಿ ಮಾಡಿಸಿದ ಹಾಗಿದೆ. ಇದರಿಂದ ಬೇರೆ ಬೇರೆ ಜನಾಂಗಗಳ ಮಧ್ಯೆ, ಸಮುದಾಯಗಳ ಮಧ್ಯೆ ಸಾಮರಸ್ಯ ತರುವಲ್ಲಿ ತೊಡಕಾಗುತ್ತಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಲ್ಲಿ ಜನಾಂಗೀಯ ಸಾಮರಸ್ಯ ತರುವಲ್ಲಿ ಯಶಸ್ಸು ಪಡೆಯಬಹುದಾಗಿದೆ.

6. ಜನಸಂಖ್ಯೆ ನಿಯಂತ್ರಣದ ಸಾಧನ: ಒಂದು ಸಮುದಾಯದಲ್ಲಿ ಏಕಪತ್ನಿತ್ವ, ಕೆಲವೊಂದು ಸಮುದಾಯಗಳಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದೆ. ಬಹುಪತ್ನಿತ್ವಕ್ಕೆ ಅವಕಾಶವಿರುವ ಸಮುದಾಯಗಳಲ್ಲಿ ಮಕ್ಕಳನ್ನು ಪಡೆಯುವ ದರ ಹೆಚ್ಚಾಗಿಯೇ ಇದೆ. ಜನಗಣತಿ ವರದಿಯನ್ನು ನೋಡಿದಾಗ ಅದು ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಸ್ತುತ ಭಾರತದಲ್ಲಿ ಬಡತನ, ನಿರುದ್ಯೋಗ, ಹಸಿವು, ಆದಾಯದಲ್ಲಿ ಅಸಮಾನತೆ ಹಾಗೂ ಅನೇಕ ಆರ್ಥಿಕ, ಸಾಮಾಜಿಕ, ಪರಿಸರಾತ್ಮಕ ಸಮಸ್ಯೆಗಳಿಗೆ ಹೆಚ್ಚಾಗುತ್ತಿರುವ ಜನಸಂಖ್ಯೆಯೂ ಒಂದು ಮೂಲ ಕಾರಣವಾಗಿರುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದಲ್ಲಿ ಜನಸಂಖ್ಯೆ ಬೆಳವಣಿಗೆ ದರದಲ್ಲಿ ನಿಯಂತ್ರಣ ಸಾಧಿಸಿ ಎಲ್ಲಾ ಸಮಸ್ಯೆಗಳ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ.

ಈ ಮೇಲೆ ವಿವರಿಸಿದಂತೆ ಪ್ರಸ್ತುತ ಇರುವ ಸಮಸ್ಯೆಗಳು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಆಗುವ ಅನುಕೂಲಗಳನ್ನು ಏಕಕಾಲದಲ್ಲಿ ಮೇಲೆ ವಿವರಿಸಲಾಗಿದೆ.

ಉಪಸಂಹಾರ
ಏಕರೂಪ ನಾಗರಿಕ ಸಂಹಿತೆ ಪರ ನಿಲುವನ್ನು ಸುಪ್ರೀಂ ಕೋರ್ಟ್ 1985ರ ಶಾಬಾನೊ ಪ್ರಕರಣದಲ್ಲಿ ತಳೆದಿತ್ತು. ಆದರೆ ಶಾಬಾನೊ ಪ್ರಕರಣ ನಂತರದ ದಿನಗಳಲ್ಲಿ ಬೇರೆಯದೇ ಬಣ್ಣ ಪಡೆದುಕೊಂಡಿದ್ದು ದುರ್ದೈವ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಧರ್ಭದಲ್ಲಿ ಜನರು ವಿಶಾಲ ಮನೋಭಾವನೆ ಮತ್ತು ಪ್ರಗತಿಪರ ನಿಲುವನ್ನು ತೋರುವ ರೀತಿಯ ಶಿಕ್ಷಣ ಮತ್ತು ಜಾಗೃತಿ ನೀಡುವ ಕೆಲಸವನ್ನು ಸರ್ಕಾರ ಮತ್ತು ಸ್ವಯಂ ಸೇವಾ ಸಂಘಗಳು, ಸೆಲೆಬ್ರಿಟಿಗಳು ಮಾಡಬೇಕಾಗಿದೆ. ಈ ಸಂಹಿತೆ ಎಲ್ಲ ಜನಾಂಗದ ಹಿತವನ್ನು ಕಾಯುವಂತೆ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರ ಈ ಜವಾಬ್ದಾರಿಯನ್ನು ಶ್ರೇಷ್ಠ ಕಾನೂನು ತಜ್ಞರಿಗೆ ವಹಿಸುವ ಮೂಲಕ ಇದಕ್ಕೊಂದು ತಾರ್ಕಿಕ ಅಂತ್ಯ ನೀಡಿ ಹೊಸ ಶಕೆಯ ಆರಂಭಕ್ಕೆ ನಾಂದಿ ಹಾಡಬೇಕಿದೆ.

------------------------------------------------------------------------------------------------------------------

ಶಂಕರಾನಂದ ಬನಶಂಕರಿ ಸರ್ ಅವರಿಂದ ರಚಿಸಲ್ಪಟ್ಟ ಪ್ರಬಂಧದ ಸಂಗ್ರಹ