Tuesday 26 November 2019

ಪ್ರಬಂಧ : ಮಹಿಳಾ ಸಬಲೀಕರಣ



"ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವೊ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮ ಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯ."
- ಸ್ವಾಮಿ ವಿವೇಕಾನಂದ


        ಯತ್ರ ನಾರ್ಯಸ್ತು ಪೂಜ್ಯಂತೆ ರಮಂತು ತತ್ರ ದೇವತಾ!, ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲದು,  ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದೆಲ್ಲ ಹೇಳುವ ಸಮಾಜದಲ್ಲಿ ಇಂದಿಗೂ ಮಹಿಳೆ ಎರಡನೇ ದರ್ಜೆಯ ಪ್ರಜೆಯಂತಿರುವುದು ಅವಮಾನಕರ ಸಂಗತಿ. ಹೆಣ್ಣು - ತಾಯಿಯಾಗಿ, ಹೆಂಡತಿಯಾಗಿ,ಮಗಳಾಗಿ, ವಿವಿಧ ರೀತಿಯಾಗಿ ಪ್ರತಿಯೊಬ್ಬರ ಪಾಲಿನಲ್ಲಿ ಸಹಕಾರಿಣಿಯಾಗಿ ಜೀವನವಿಡಿ ಇನ್ನೊಬ್ಬರ ಬದುಕಿಗೆ ಬೆಳಕಾಗುವ ವ್ಯಕ್ತಿ.

          ಲಿಂಗ ತಾರತಮ್ಯವು ಮಾನವೀಯ ಮುಖವನ್ನು ವಿಕಾರಗೊಳಿಸಿದೆ. ಈ ತಾರತಮ್ಯವು ಹೆಣ್ಣು ಮಗುವಿನ ಜನನಕ್ಕೆ ಮುಂಚೆಯೇ ಪ್ರಾರಂಭವಾಗಿ ಅದು ಅವಳ ಹೆಣ್ಣುತನದ ಜೀವನದುದ್ದಕ್ಕೂ ಮುಂದುವರಿಯುತ್ತಿದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕಾಗಿದೆ. ಮಹಿಳೆಯರು ಇನ್ನು ಅಶಕ್ತರಿರುವುದರಿಂದಲೇ ಮಹಿಳಾ ಸಶಕ್ತೀಕರಣ  ವಿಷಯವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅವರು ಸಶಕ್ತರಾಗುವ ತನಕ ಮುಂದುವರೆಯುತ್ತಲೇ ಇರುತ್ತದೆ.

ಮಹಿಳೆಯ ಸ್ಥಾನಮಾನಗಳು ವಿವಿಧ ಕಾಲಘಟ್ಟಗಳಲ್ಲಿ ವಿವಿಧ ರೀತಿಯಲ್ಲಿತ್ತು. ವಿವಿಧ ಕಾಲಘಟ್ಟದ ಸ್ಥಾನಮಾನ ನೋಡುವುದಾದರೆ,
  • ವೇದಗಳ ಕಾಲದಲ್ಲಿ: ಪುರಾಣಗಳಲ್ಲಿ, ವೇದ, ಉಪನಿಷತ್ತುಗಳಲ್ಲಿ ಮಹಿಳೆಗೆ 'ಮಾತಾ' ಹಾಗು 'ದೇವಿ' ಎಂಬ ಉನ್ನತ ಸ್ಥಾನ ನೀಡಿ ಪುರುಷರಿಗೆ ಸರಿಸಮಾನವಾದ ಸ್ಥಾನವನ್ನು ಕೊಡಲಾಗಿತ್ತು. ಮನುಸ್ಮುತಿಯ ದೃಷ್ಟಿಯಲ್ಲಿ ಅವಳು ಅತ್ಯಂತ ಅಮೂಲ್ಯ ಹಾಗೂ ಗೌರವಾನ್ವಿತಳಾಗಿದ್ದಳು.
  • ಮಧ್ಯಕಾಲೀನ ಭಾರತ: ಮಧ್ಯಕಾಲೀನ ಭಾರತದಲ್ಲಿ ಮಹಿಳೆಯ ಸ್ಥಿತಿಗತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಪರದಾ ಪದ್ದತಿ, ಸತಿಸಹಗಮನ ಪದ್ಧತಿ, ಬಹುಪತ್ನಿತ್ವ, ದೇವದಾಸಿ ಪದ್ಧತಿಗಳು, ಜೋಹಾರ್ ಪದ್ಧತಿಗಳು ಜಾರಿಯಲ್ಲಿದ್ದವು. 
  • ಆಧುನಿಕ ಭಾರತ: ಆಧುನಿಕ ಭಾರತದ ಸಮಯ ಮಹಿಳಾ ಸ್ಥಿತಿಗತಿಗಳ ಸುಧಾರಣಾ ಕಾಲವಾಯಿತು. ಮಧ್ಯಕಾಲೀನ ಭಾರತದಲ್ಲಿನ ತಪ್ಪುಗಳನ್ನು ತಿದ್ದಿ ಹಲವಾರು ಕಾಯ್ದೆ ರೂಪಿಸಿ, ಮಹಿಳಾ ಸಬಲೀಕರಣದಲ್ಲಿ ಪ್ರಗತಿ ಸಾಧಿಸಲಾಯಿತು.

ಮಹಿಳೆ - ಇಂದು: 
          ಆಧುನಿಕ  ಯುಗದಲ್ಲಿ ಗಂಡಸು ಈ ಅಮೂಲ್ಯವಾದ ಜೀವಿಯನ್ನು ಅಮೂಲ್ಯವಾದ ಸರಕನ್ನಾಗಿ ಬದಲಿಸಿ ತನ್ನ ಸ್ವಾಧೀನಪಡಿಸಿಕೊಂಡು ತನಗೆ ಬೇಕಾದ ಹಾಗೆ ಉಪಯೋಗಿಸಿಕೊಂಡು ನಂತರ ಬಿಟ್ಟು ಬಿಟ್ಟ. ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಯಂದ ದೂರವಿಡಲಾಯಿತು. ಇಂದಿನ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಗಮನಿಸುವುದಾದರೆ,
  1. ವರದಕ್ಷಿಣೆ: ಮದುವೆಯು ಒಂದು ವ್ಯಾಪಾರವಾಗಿ ಬಿಟ್ಟಿದೆ. ಇದು ವರನಿಗೆ ಲಾಭಕರವಾದರೆ ವಧುವಿನ ಕಡೆಯವರಿಗೆ ಖರ್ಚಿನದ್ದಾಗಿರುತ್ತದೆ. ವಧುವು ಅಪಾರ ಪ್ರಮಾಣದ ವರದಕ್ಷಿಣೆ ಕೊಡಬೇಕಾತ್ತದೆ. ವರದಕ್ಷಿಣೆ ತರದ ಹೆಣ್ಣು ಮಕ್ಕಳನ್ನು ಗಂಡನ ಮನೆಯವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಾರೆ ಮತ್ತೆ ಕೆಲವೊಮ್ಮೆ ಈ ಲೋಕದಿಂದಲೇ ಇಲ್ಲವಾಗಿಸಿ ಬಿಡುತ್ತಾರೆ. 
  2. ಅತ್ಯಾಚಾರ: ರಾಷ್ಟ್ರೀಯ ಮಹಿಳಾ ಅಯೋಗ & ಮಹಿಳಾ ಹಕ್ಕುಗಳ  ಆಯೋಗದ ವರದಿಯ ಪ್ರಕಾರ ಮಹಿಳೆಯರ ವಿರುದ್ದದ ಅಪರಾಧಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ,ಅತ್ಯಾಚಾರ ಪ್ರಕರಣಗಳು ಮಹಿಳೆಯರ ವಿರುದ್ಧ ಹೆಚ್ಚುತ್ತಿವೆ, ಅಪ್ರಾಪ್ತ ಬಾಲಕಿಯರು ಇದಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಬಲಿಯಾದ ಹೆಣ್ಣು ಮಕ್ಕಳು ಬಹಳ ವೇದನೆ ಅನುಭವಿಸುತ್ತಾರೆ. ಇವರು ಕಾನೂನಿನ ಅಮಾನವೀಯ & ಅಸಭ್ಯ ವಿಚಾರಣೆಗೆ ಅವರ ನೈತಿಕ ಸ್ಟೈರ್ಯವನ್ನು ಕುಗ್ಗುತ್ತದೆ. 
  3. ಬಾಲ್ಯ ವಿವಾಹ: ಭಾರತೀಯ ಸಮಾಜದ ಮತ್ತೊಂದು ಅನಿಷ್ಟ ಪದ್ದತಿ ಎಂದರೆ ಬಾಲ್ಯ ವಿವಾಹ. ಹುಡುಗಿಯು ಶಾಲೆಗೆ ಹೋಗಿ ತನ್ನ ಪುಸ್ತಕ & ಗೆಳತಿಯರೊಂದಿಗೆ ಆಟವಾಡಿಕೊಂಡಿರುವ ಸಮಯದಲ್ಲಿ ಅವಳು ಮದುವೆಯಾಗುವಂತೆ ಒತ್ತಾಯಿಸಲ್ಪಡುತ್ತಾಳೆ. ಬಾಲಕಿಯು ತಾಯಿಯಾಗುವುದಕ್ಕೆ ಮಾನಸಿಕವಾಗಿ & ದೈಹಿಕವಾಗಿ ತಯಾರಾಗಿಲ್ಲದಿರುವಾಗ ತಾಯಿಯಾಗಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯಾಗುವುದರಿಂದ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ವೇಳೆ ಆ ಬಾಲಕಿಯ ಸಾವು ಕೂಡ ಸಂಭವಿಸುತ್ತದೆ. 
  4. ಶಿಶು ಹತ್ಯೆ: ಹೆಣ್ಣು ಶಿಶುವಿನ ಜನನವನ್ನು ಒಂದು ರೀತಿಯಲ್ಲಿ ಕೀಳೆಂದು ಪರಿಗಣಿಸಲಾಗುತ್ತಿದೆ. ನವಜಾತ ಹೆಣ್ಣು ಶಿಶುವಿನ ಅಳುವಿನ ಜೊತೆಗೆ ಇಡೀ ಕುಟುಂಬ ಅಳಲು ಪ್ರಾರಂಭಿಸುತ್ತದೆ. ಹೊಟ್ಟೆಯಲ್ಲಿರುವ ಮಗು ಹೆಣ್ಣೆಂದು ತಿಳಿದ ಕೂಡಲೇ ಅದು ಈ ಜಗತ್ತಿಗೆ ಬರುವ ಮೊದಲೇ ಆ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲಾಗುತ್ತದೆ. ಜೀವ ಉಳಿಸುವಲ್ಲಿ ದೇವರ ನಂತರದ ಸ್ಥಾನ ಹೊಂದಿರುವ ವೈದ್ಯರುಗಳು ವಿಜ್ಞಾನ & ತಂತ್ರಜ್ಞಾನದ ದುರುಪಯೋಗ ಪಡೆದು ಹಣಕ್ಕಾಗಿ ಲಿಂಗ ಪತ್ತೆ ಹಚ್ಚಿ ಹೆಣ್ಣು ಶಿಶುಗಳ ಮರಣಕ್ಕೆ ಕಾರಣರಾಗುತ್ತಿದ್ದಾರೆ. ಗಂಡು ಮಗುವಿನ ಬಯಕೆ ಜನಸಂಖ್ಯೆಯ ಸಮತೋಲನ ಕಾಯ್ದುಕೊಳ್ಳಲು ತೊಡಕಾಗಿದೆ. 
  5.  ಹೆಣ್ಣು ಮಕ್ಕಳ ಅಶ್ಲೀಲತೆಯ ಪ್ರದರ್ಶನ & ಅನೈತಿಕವಾಗಿ ಮಾರಾಟ ಮಾಡುವುದರ ಮೂಲಕ ಹೆಣ್ಣು ಮಕ್ಕಳನ್ನು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ & ಗುಡ್ಡಗಾಡು ಜನಾಂಗದ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಿ ವೇಶ್ಯೆಯರನ್ನಾಗಿ ಮಾಡಲಾಗುತ್ತಿದೆ.

ಸಬಲೀಕರಣದ ಹೆಜ್ಜೆ 
          ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ಅನೇಕ ಮಹನೀಯರ ಬಗ್ಗೆ ತಿಳಿದು ಬರುತ್ತದೆ, ಅವರಲ್ಲಿ ಪ್ರಮುಖರಾದವರೆಂದರೆ, ಬುದ್ಧ, ಆದಿ ಶಂಕರಾಚಾರ್ಯ, ಬಸವಣ್ಣ, ರಾಜಾರಾಮ ಮೋಹನ್ ರಾಯ್ ,ಈಶ್ವರ್ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ, ಮಹತ್ಮಾಗಾಂಧಿ ಮುಂತಾದವರು ಇವರಲ್ಲದೆ ಬ್ರಿಟಿಷ್ ಸರ್ಕಾರವು ಕೂಡ ಮಹಿಳೆಯರ ಸಶಕ್ತೀಕರಣಕ್ಕೆ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿತು.  ಆದರೆ ಕಾನೂನಿನಿಂದ ಮಾತ್ರ  ಮಹಿಳಾ ಸಬಲೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಸ್ವಂತ ತಾವೇ ಮುಂದೆ ಬಂದು ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೇ ತಮ್ಮ ಸಶಕ್ತೀಕರಣದ ಕಡೆಗೆ ಒಗ್ಗಟ್ಟಾಗಿ ಮುಂದೆ ಸಾಗಬೇಕು.

          ಸಾಮಾನ್ಯ ಮಹಿಳೆಯರು ಈಗಾಗಲೇ ಸಶಕ್ತೀಕರಣಗೊಂಡು ಮಹತ್ವದ ಸಾಧನೆ ಮಾಡಿದ ಮಹಿಳೆಯರಿಂದ ಪ್ರಭಾವಿತರಾಗಿ ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು. ಇಂತಹ ಪ್ರಭಾವಿ ದಿಟ್ಟ ಮಹಿಳೆಯರಲ್ಲಿ ಪ್ರಮುಖರಾದವರೆಂದರೆ ಭಾರತದ ಪ್ರಥಮ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ನೊಬೆಲ್ ಶಾಂತಿ ಪುರಸ್ಕಾರ ಪಡೆದ ಸಮಾಜ ಸೇವಕಿ ಮದರ್ ತೆರೇಸಾ, ಸರೋಜಿನಿ ನಾಯ್ಡು, ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ, ಪ್ರಥಮ ಮಹಿಳಾ ಐ.ಪಿ.ಎಸ್ ಅಧಿಕಾರಿ ಕಿರಣ್ ಬೇಡಿ , ಗಗನ ಯಾತ್ರಿ ಕಲ್ಪನಾ ಚಾವ್ಲಾ , ಮೀನಾಕುಮಾರಿ, ಲತಾ ಮಂಗೇಷ್ಕರ್‌,  ಸುಷ್ಮ ಸ್ವರಾಜ್, ಉಮಾಭಾರತಿ ಮುಂತಾದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸಂವಿಧಾನದಲ್ಲಿನ ಪೂರಕ ಅಂಶಗಳು
ಸ್ತ್ರೀಯರ ಸ್ಥಾನಮಾನ ಸುಧಾರಿಸುವ ದಿಟ್ಟ ಹೆಜ್ಜೆಗಳನ್ನು ಭಾರತದ ಸಂವಿಧಾನದ ಮೂಲಕ ಶಾಸನಾತ್ಮಕ, ಶೈಕ್ಷಣಿಕ, ಕಾನೂನಾತ್ಮಕ ಬೆಂಬಲವನ್ನು ನೀಡಲಾಯಿತು. ಸಂವಿಧಾನದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು
  • ವಿಧಿ-14 ಕಾನೂನಿನ ಮುಂದೆ ಎಲ್ಲರೂ ಸಮಾನರು.
  • ವಿಧಿ-15 ಜಾತಿ, ಲಿಂಗ, ಹುಟ್ಟಿದ ಸ್ಥಳ, ಬೇದಭಾವ ಮಾಡಬಾರದು.
  • ವಿಧಿ-16 ಸಾರ್ವಜನಿಕ ಹುದ್ದೆಯಲ್ಲಿ ಸಮಾನ ಅವಕಾಶ.
  • ಚುನಾವಣೆಗೆ ಸ್ಪರ್ಧಿಸುವ ಹಕ್ಕು.
ಇವುಗಳನ್ನು ಪಡೆದು ಸಬಲರಾಗುವುದು ಮಹಿಳೆಯರ ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಿ ಪಡೆಯುವ ಹಕ್ಕುಗಳೇ ಹೆಚ್ಚು.

ಇತರೆ ಕ್ಷೇತ್ರಗಳಲ್ಲಿ ಮಹಿಳೆಯ ಸಬಲೀಕರಣ
          ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು.ಮಕ್ಕಳನ್ನು ಹೆರುವುದು ಅವುಗಳ ಲಾಲನೆ, ಪಾಲನೆ ಮಾಡುವುದು & ಕುಟುಂಬವನ್ನು ನೋಡಿಕೊಳ್ಳುವುದು ಮಾತ್ರ ಅವಳ ಕೆಲಸವಾಗಿತ್ತು, ಆದರೆ ಈಗ ಕಾಲ ಬದಲಾಗುತ್ತಿದೆ. ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ & ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ & ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಬೆಳೆದಿದ್ದಾಳೆ. ಈಗ ಮಹಿಳೆಯರು ಸಂಘಟಿತ, ಅಸಂಘಟಿತ, ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.

ಮಹಿಳಾ ಸಬಲೀಕರಣದಲ್ಲಿ ಸರ್ಕಾರ ಮತ್ತು ಸಮಾಜದ ಪಾತ್ರ

          ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಯೋಜನೆ ಮತ್ತು  ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. 2001ನೇ ವರ್ಷವನ್ನು ಮಹಿಳಾ ಸಶಕ್ತೀಕರಣ ವರ್ಷ” ಎಂದು ಘೋಷಿಸಲಾಗಿದೆ. ಮಹಿಳೆಯರ ಸಶಕ್ತೀಕರಣದಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ವಯಂ ಸೇವಾ ಸಂಸ್ಥೆಗಳೇ ಬಹಳಷ್ಟು ಮಹತ್ವದ ಪಾತ್ರ ವಹಿಸಿವೆ.

          ಮಹಿಳೆಯರು ಸುರಕ್ಷತೆ ಮತ್ತು  ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ , ಭೌದ್ದಿಕ, ಶೈಕ್ಷಣಿಕ, ಮಾನಸಿಕ ಹಾಗು ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯ ಇದೆ. ಮಹಿಳೆಯರ ಸುರಕ್ಷತೆಗೋಸ್ಕರ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ. ಕಾನೂನುಗಳನ್ನು ಯಾವುದೇ ಪಕ್ಷಪಾತವಿಲ್ಲದೇ ಸಮರ್ಪಕವಾಗಿ ಜಾರಿಗೆ ಬರುವ ತನಕ ಮಹಿಳೆಯರ ವಿರುದ್ಧದ ಅಪರಾಧಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮಹಿಳೆಯರ ವಿರುದ್ದದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದೆ. ಎಷ್ಟೋ ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿದೆ. ಅನೇಕ ಪ್ರಕರಣಗಳು ದೀರ್ಘಕಾಲ ನಡೆಯುತ್ತಿವೆ. ನಮ್ಮ ಕಾನೂನುಗಳಲ್ಲಿಯ ಕೆಲವೊಂದು ಲೋಪಗಳಿಂದಾಗಿ ಆರೋಪಿಗಳು ಪಾರಾಗುತ್ತಿದ್ದಾರೆ. ಈ ಕಾನೂನುಗಳನ್ನು ಸರಿಪಡಿಸಬೇಕಾಗಿದೆ ಮತ್ತು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಮಹಿಳೆಯರಿಗೆ ಹಿಂಸೆ ಕೊಡುವವರಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕಾಗಿದೆ. ಅತ್ಯಾಚಾರಿಗಳಿಗೆ ಕೊಲೆಗಡುಕರಿಗೆ ಮರಣ ದಂಡನೆಯನ್ನು ವಿಧಿಸಬೇಕು. ಮಹಿಳೆಯರಿಗೆ ಶಿಕ್ಷಣ & ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು. ಪುರುಷರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಒಳ್ಳೆಯ ಶಿಕ್ಷಣ & ಉದ್ಯೋಗಾವಕಾಶಗಳು ಮಹಿಳೆಯರ ಮನೋಸ್ಥೆರ್ಯವನ್ನು ಹೆಚ್ಚಿಸುತ್ತದೆ. ಪುರುಷ ಸಮಾಜವು ಮಹಿಳೆಯನ್ನು ಜೀವನದ ಅವಿಭಾಜ್ಯ ಅಂಗವೆಂದು ಒಪ್ಪಿಕೊಳ್ಳಬೇಕು. 

ಉಪಸಂಹಾರ:
          ಮಹಿಳಾ ಸಬಲೀಕರಣ ಕೇವಲ ಸರ್ಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. ಸಮಾಜವನ್ನು ಜಾಗೃತಗೊಳಿಸಬೇಕಾದರೆ ಮೊದಲು ಮಹಿಳೆಯನ್ನು ಜಾಗೃತಗೊಳಿಬೇಕು. ಒಂದು ಸಲ ಮಹಿಳೆ ಪ್ರಗತಿ ಪಥದಲ್ಲಿ ಚಲಿಸಲು ಪ್ರಾರಂಭಿಸಿದರೆ ಇಡೀ ಕುಟುಂಬ ಹಳ್ಳಿ & ಸಂಪೂರ್ಣ ದೇಶದ ಪ್ರಗತಿಯಾಗುತ್ತದೆ. ಆದ್ದರಿಂದ ಮಹಿಳೆಯರ ಸಬಲೀಕರಣ ದೇಶದ ಪ್ರಗತಿಗೆ ಅತ್ಯವಶ್ಯವಾಗಿದೆ.

1 comment: