ಭಾರತದಲ್ಲಿ ಚುನಾವಣಾ ಸುಧಾರಣೆಗಳು
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಅವಿಭಾಜ್ಯ ಮತ್ತು ಅತ್ಯಂತ ಪ್ರಮುಖ ಪ್ರಕ್ರಿಯೆ. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲು ಸಾಧ್ಯ.
ಭಾರತದಲ್ಲಿ ಚುನಾವಣಾ ವ್ಯವಸ್ಥೆಯ ಸಮಸ್ಯೆಗಳು
ಭಾರತದ ಚುನಾವಣಾ ಪ್ರಕ್ರಿಯೆಗೆ ಕಳಂಕ ತರುವ ಅನೇಕ ಸಮಸ್ಯೆಗಳಿವೆ. ಕೆಲವು
ಪ್ರಮುಖವಾದವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.
ಪ್ರಮುಖವಾದವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.
- ಹಣ ಬಲ: ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರ ಮತ್ತು ಆಮಿಷ ನೀಡಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಹೆಚ್ಚಿನ ಅಭ್ಯರ್ಥಿಗಳು ಅನುಮತಿಸಿರುವ ಖರ್ಚಿನ ಮಿತಿಯನ್ನು ಮೀರಿ ಹಣದ ಹೊಳೆ ಹರಿಸುತ್ತಾರೆ.
- ತೋಳ್ಬಲ : ದೇಶದ ಕೆಲವು ಕಡೆ ಮತದಾನದ ಸಮಯದಲ್ಲಿ ಹಿಂಸಾಚಾರ, ಬೆದರಿಕೆ, ಮತಗಟ್ಟೆ ಅತಿಕ್ರಮ ಪ್ರವೇಶ ಮುಂತಾದ ಅಕ್ರಮ ಹಾಗೂ ಅಹಿತಕರ ಘಟನೆ ನಡೆದ ಬಗ್ಗೆ ವ್ಯಾಪಕ ವರದಿಗಳಿವೆ.
- ರಾಜಕೀಯದ ಅಪರಾಧೀಕರಣ ಮತ್ತು ಅಪರಾಧಿಗಳ ರಾಜಕೀಯ: ಹಣ ಮತ್ತು ತೋಳ್ಬಲದಿಂದ ಚುನಾವಣೆಯಲ್ಲಿ ಗೆದ್ದು ಅಪರಾಧಿಗಳು ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಇದರಿಂದಾಗಿ ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ಸ್ಥಗಿತಗೊಳ್ಳುತ್ತದೆ. ರಾಜಕೀಯ ಪಕ್ಷಗಳು ಹಣಕ್ಕಾಗಿ ಅಪರಾಧಿಗಳನ್ನು ಚುನಾವಣಾ ಕಣಕ್ಕಿಳಿಸಿ ಅದರ ಪ್ರತಿಯಾಗಿ ಅವರಿಗೆ ರಾಜಕೀಯ ಪ್ರೋತ್ಸಾಹ ಮತ್ತು ರಕ್ಷಣೆ ನೀಡುತ್ತವೆ.
- ಸರ್ಕಾರಿ ಮೂಲಸೌಕರ್ಯಗಳ ದುರುಪಯೋಗ : ಅಧಿಕಾರದಲ್ಲಿರುವ ಪಕ್ಷಗಳು ಸರ್ಕಾರಿ ವಾಹನಗಳನ್ನು ಪ್ರಚಾರ ಮಾಡಲು ಬಳಸುವುದು, ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತುಗಳು ನೀಡುವುದು, ಇದಲ್ಲದೆ ಇನ್ನಿತರ ಮಾರ್ಗಗಳ ಮೂಲಕ ತಮ್ಮ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳುವುದು.
- ಸ್ವತಂತ್ರ ಅಭ್ಯರ್ಥಿಗಳ ಮೂಲಕ ಮತ ವಿಭಜನೆ : ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಸ್ವತಂತ್ರ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಗೆ ಹೋಗಬಹುದಾದ ಮತಗಳನ್ನು ವಿಭಜಿಸಿ ಗೆಲ್ಲುವ ಹುನ್ನಾರ ನಡೆಸುವುದು.
- ಜಾತಿವಾದ: ಕೆಲವು ಜಾತಿ ಸಮುದಾಯಗಳು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಬಲವಾದ ಬೆಂಬಲವನ್ನು ನೀಡಿದ ಪ್ರಕರಣಗಳಿವೆ. ಹೀಗಾಗಿ, ರಾಜಕೀಯ ಪಕ್ಷಗಳು ವಿಭಿನ್ನ ಜಾತಿ ಸಮುದಾಯಗಳ ಮನವೊಲಿಸಲು ಜಾತಿ ಆಧಾರಿತ ವಿವಿಧ ಕೊಡುಗೆಗಳನ್ನು ನೀಡುತ್ತವೆ. ಪ್ರಬಲ ಜಾತಿ ಸಮುದಾಯವು ತಮ್ಮ ಜಾತಿಯ ಅಭ್ಯರ್ಥಿಗೆ ಚುನಾವಣೆಯ ಟಿಕೆಟ್ ನೀಡುವಂತೆ ಪಕ್ಷಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತವೆ. ಜಾತಿ ಆಧಾರದ ಮೇಲೆ ಮತ ಚಲಾಯಿಸುವ ರೂಢಿ ದೇಶದಲ್ಲಿ ಚಾಲ್ತಿಯಲ್ಲಿದೆ, ಇದು ಪ್ರಜಾಪ್ರಭುತ್ವ ಮತ್ತು ಸಮಾನತೆಯ ತತ್ವಕ್ಕೆ ವಿರೋಧವಾಗಿದೆ. ಇದು ದೇಶದ ಏಕತೆ ಮತ್ತು ಜಾತ್ಯತೀತ ವಿರೋಧಿಯಾಗಿದೆ.
- ರಾಜಕೀಯದಲ್ಲಿ ನೈತಿಕ ಮೌಲ್ಯಗಳ ಕೊರತೆ: ಭಾರತದಲ್ಲಿನ ರಾಜಕೀಯ ಭ್ರಷ್ಟಾಚಾರದ ಕೂಪವಾಗಿದೆ. ಹಣ ಸಂಪಾದಿಸಲು ಮತ್ತು ಅಧಿಕಾರದ ದಾಹಕ್ಕಾಗಿ ಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಜನರ ಜೀವನದಲ್ಲಿ ಬದಲಾವಣೆ ತರಲು ಬಯಸಿ ರಾಜಕೀಯಕ್ಕೆ ಪ್ರವೇಶಿಸುವ ನಾಯಕರು ಸಂಖ್ಯೆ ಬಹಳ ಕಡಿಮೆ. ಗಾಂಧಿವಾದಿ ಮೌಲ್ಯಗಳು ಭಾರತೀಯ ರಾಜಕೀಯ ರಂಗದಿಂದ ಕಾಣೆಯಾಗಿವೆ.
ಚುನವಣಾ ಸುಧಾರಣೆಗಳು
2000 ಪೂರ್ವದ ಚುನಾವಣಾ ಸುಧಾರಣೆಗಳು
- ಮತದಾನದ ವಯಸ್ಸನ್ನು ಕಡಿತಗೊಳಿಸಿದ್ದು: ಸಂವಿಧಾನದ 61 ನೇ ತಿದ್ದುಪಡಿ ಪ್ರಕಾರ ಮತದಾನದ ಕನಿಷ್ಠ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲಾಯಿತು.
- ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM): ದೆಹಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಚುನಾವಣೆಗಳಲ್ಲಿ 1998 ರಲ್ಲಿ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಯಿತು. ಈಗ ವ್ಯಾಪಕವಾಗಿ ಇವಿಎಂಗಳನ್ನು ಬಳಸಲಾಗುತ್ತಿದ್ದು ಈ ಮೂಲಕ ಮತಗಟ್ಟೆಯ ಅಕ್ರಮಗಳಿಗೆ ಅಂಕುಶ ತರಲಾಗಿದೆ.
- ಅಭ್ಯರ್ಥಿಯು ಎರಡಕ್ಕಿಂತ ಹೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಬಂಧ ವಿಧಿಸಲಾಗಿದೆ.
- ಮತದಾನದ ದಿನಗಳಲ್ಲಿ ಉದ್ಯೋಗದಾತ ಕಂಪನಿಗಳು ಪಾವತಿ ಸಹಿತ ರಜೆ ನೀಡಬೇಕು ಮತ್ತು ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.
- ಚುನಾವಣಾ ಪ್ರಚಾರದ ಅವಧಿಯನ್ನು ಕಡಿಮೆ ಮಾಡಲಾಗಿದೆ.
- ಮತದಾನದ ಸಮಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
- ಶಸ್ತ್ರಾಸ್ತ್ರಗಳ ಸಹಿತ ಮತದಾನ ಕೇಂದ್ರಕ್ಕೆ ಅಥವಾ ಹತ್ತಿರ ಹೋಗುವುದನ್ನು ಕಾನೂನಿನ ಅನುಸಾರ ನಿಷೇಧಿಸಲಾಗಿದೆ. ಇದನ್ನು ಮೀರಿದವರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
2000 ನಂತರದ ಚುನಾವಣಾ ಸುಧಾರಣೆಗಳು
- ಚುನಾವಣಾ ವೆಚ್ಚದ ಮೇಲೆ ಮಿತಿ: ಪ್ರಸ್ತುತ, ರಾಜಕೀಯ ಪಕ್ಷವು ಚುನಾವಣೆಯಲ್ಲಿ ಅಥವಾ ಅಭ್ಯರ್ಥಿಗೆ ಖರ್ಚು ಮಾಡುವ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಆದರೆ, ಆಯೋಗವು ವೈಯಕ್ತಿಕ ಅಭ್ಯರ್ಥಿಗಳ ಖರ್ಚಿಗೆ ಕಡಿವಾಣ ಹಾಕಿದೆ. ಲೋಕಸಭಾ ಚುನಾವಣೆಗೆ ಇದು 50 - 70 ಲಕ್ಷ ರೂ (ಅವರು ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಾಜ್ಯವನ್ನು ಅವಲಂಬಿಸಿ), ಮತ್ತು ವಿಧಾನಸಭಾ ಚುನಾವಣೆಗೆ 20 - 28 ಲಕ್ಷ ರೂ.
- ಚುನಾವಣಾ ಸಮೀಕ್ಷೆ ಮೇಲಿನ ನಿರ್ಬಂಧ: ಅಂತಿಮ ಹಂತದ ಚುನಾವಣೆ ಮುಗಿದ ನಂತರವೇ ಚುನಾವಣಾ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಸಾರ ಮಾಡಲು 2019 ರ ಲೋಕಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ನಿರೀಕ್ಷಿತ ಫಲಿತಾಂಶದ ಮೇಲೆ ಮತದಾರರು ದಾರಿ ತಪ್ಪುದಿರಲು ಅಥವಾ ಪೂರ್ವಾಗ್ರಹ ಪೀಡಿತರಾಗುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿತ್ತು.
- ಅಂಚೆ ಮತಪತ್ರದ ಮೂಲಕ ಮತದಾನ: 2013 ರಲ್ಲಿ ದೇಶದಲ್ಲಿ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯಾಪ್ತಿಯನ್ನು ವಿಸ್ತರಿಸಲು ಚುನಾವಣಾ ಆಯೋಗ ನಿರ್ಧರಿಸಿತು. ಈ ಹಿಂದೆ, ವಿದೇಶಿ ನಿಯೋಗದಲ್ಲಿರುವ ಭಾರತೀಯ ಸಿಬ್ಬಂದಿ ಮತ್ತು ಸೀಮಿತ ರಕ್ಷಣಾ ಸಿಬ್ಬಂದಿಗಳು ಮಾತ್ರ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಬಹುದಿತ್ತು. ಈಗ, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಲ್ಲ ಮತದಾರರ ವರ್ಗವನ್ನು ಆರಕ್ಕೆ ವಿಸ್ತರಿಸಲಾಗಿದೆ.
- ಜನ ಜಾಗೃತಿ: ಚುನಾವಣಾ ಆಯೋಗದ ಸ್ಥಾಪನಾ ದಿನವಾದ ಜನವರಿ 25 ಅನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.
- ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆ, ಸ್ವತ್ತುಗಳು ಇತ್ಯಾದಿಗಳನ್ನು ಘೋಷಿಸುವುದು ಕಡ್ಡಾಯವಾಗಿದೆ ಮತ್ತು ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿಯನ್ನು ನಮೂದಿಸುವುದು ಈಗ ಚುನಾವಣಾ ಅಪರಾಧವಾಗಿದ್ದು, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
- ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದನ್ನು ಯಾವುದೇ ಸಾರ್ವಜನಿಕರು “C-VIGIL” ಎಂಬ ಅಪ್ಲಿಕೇಶನಲ್ಲಿ ಲೈವ್ ವಿಡಿಯೋ ಮಾಡಿ ನೇರವಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.
- “ಚುನಾವಣಾ ಬಾಂಡ್” ಯೋಜನೆ ಜಾರಿಗೆ ತಂದು ರಾಜಕೀಯ ಪಕ್ಷಗಳು ದೇಣಿಗೆಯನ್ನು ಬಾಂಡ್ ಮೂಲಕವೇ ಸಂಗ್ರಹಿಸಲು ಕ್ರಮವಹಿಸಲಾಗಿದೆ.
- NOTA ಜಾರಿಗೆ ತರುವ ಮೂಲಕ ಸ್ಪರ್ಧಿಸಿದ ಯಾವುದೇ ಅಭ್ಯರ್ಥಿ ಅರ್ಹನಿಲ್ಲವೆಂದು ಮತದಾರ ತನ್ನ ಹಕ್ಕು ಚಲಾಯಿಸಬಹುದಾಗಿದೆ.
- VVPAT: ಮತಖಾತ್ರಿಯಂತ್ರ ಎಂಬ ಯಂತ್ರವನ್ನು ಪರಿಚಯಿಸಲಾಗಿದೆ. ಮತದಾರ ಮತ ಚಲಾಯಿಸಿದ ನಂತರ ಯಾವ ಅಭ್ಯರ್ಥಿಗೆ ತನ್ನ ಮತ ಚಲಾವಣೆ ಆಗಿದೆ ಎಂದು ತಿಳಿದುಕೊಳ್ಳಲು ಅವಕಾಶ ಕಲ್ಪಿಸಿದೆ.
ಚುನಾವಣಾ ವ್ಯವಸ್ಥೆಯಲ್ಲಿ ಮಾಡಬೇಕಾದ ಇನ್ನಿತರ ಸುಧಾರಣೆಗಳು
- ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಬೇಕು.
- ಬಹುಪಕ್ಷೀಯ ಪದ್ಧತಿಯ ಪರ್ಯಾಯವಾಗಿ ದ್ವಿ-ಪಕ್ಷ ಪದ್ಧತಿ ಜಾರಿಗೆ ತಂದು, ರಾಜಕೀಯ ಸ್ಥಿರತೆ ಕಾಪಾಡಬೇಕು.
- ನೋಟಾ (NOTA) ಬಗ್ಗೆ ಪರಿಣಾಮಕಾರಿ ಕ್ರಮಗಳು ಇನ್ನೂ ಜಾರಿಯಾಗಬೇಕಿದೆ.
- ಏಕಕಾಲಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆ ಜರುಗಬೇಕಿದೆ
- ರಾಜಕೀಯ ನಿವೃತ್ತಿ ಅವಧಿಯನ್ನು ನಿಗದಿ ಪಡಿಸಬೇಕಿದೆ.
- ಆಯ್ಕೆಯಾದ ಅಭ್ಯರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ.
ಉಪಸಂಹಾರ
ಒಟ್ಟಿನಲ್ಲಿ ಒಂದು ಯಶಸ್ವಿ ಪ್ರಜಾಪ್ರಭುತ್ವ ದೇಶಕ್ಕೆ ಆಧಾರಸ್ತಂಭವಾಗಿರುವ ಚುನಾವಣೆಗಳು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ದೇಶದ ಎಲ್ಲ ನಾಗರಿಕರು ವಿವೇಚನೆಯಿಂದ ಮತ ಚಲಾಯಿಸಿ ಸೂಕ್ತ ಜನಪ್ರತಿನಿಧಿ ಆರಿಸಿ ತರಬೇಕು.
ಸರಿಯಾದ ಮತ್ತು ಸರಳವಾದ ವಿವರಣೆ
ReplyDelete