Sunday 24 November 2019

ಪ್ರಬಂಧ : ಭಯೋತ್ಪಾದನೆ




ಭಯೋತ್ಪಾದನೆ ಎಂಬ ಪದವನ್ನು ಕೇಳಿದರೆ ಸಾಕು ಮನದಲ್ಲಿ ಭಯ ಆವರಿಸುತ್ತದೆ. ಭಯೋತ್ಪಾದನೆ ಎಂಬ ಪದದಲ್ಲಿಯೇ ಅದರ ಅರ್ಥ ಅಡಗಿದ್ದು, ಭಯೋತ್ಪಾದನೆ ಎಂದರೆ ಭಯದ ಉತ್ಪಾದನೆ  ಎಂದರ್ಥವಾಗುತ್ತದೆ. 

ಭಯೋತ್ಪಾದನೆಯು ಕಾನೂನುಬಾಹಿರ ವಿಧಾನಗಳಿಂದ ಸಾಮಾನ್ಯ ಜನರಲ್ಲಿ ಭಯವನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ. ಇದು ಮಾನವೀಯತೆಗೆ ಅಪಾಯವಾಗಿದ್ದು ಹೇಡಿತನದ ಕಾರ್ಯವಾಗಿದೆ. ಇದು ಹಿಂಸಾಚಾರ, ಗಲಭೆ, ಕಳ್ಳತನ, ಅತ್ಯಾಚಾರ, ಅಪಹರಣ, ಬಾಂಬ್ ಸ್ಫೋಟಗಳು ಇತ್ಯಾದಿಗಳ ಮೂಲಕ ಭಯ ಹರಡುವ ವ್ಯಕ್ತಿ ಅಥವಾ ಗುಂಪನ್ನು ಒಳಗೊಂಡಿದೆ. ಭಯೋತ್ಪಾದನೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಭಯೋತ್ಪಾದಕ ಕೇವಲ ಭಯೋತ್ಪಾದಕ, ಹಿಂದೂ ಅಥವಾ ಮುಸ್ಲಿಂ ಅಲ್ಲ.

ಭಯೋತ್ಪಾದನೆ ಪದವು ಇಂಗ್ಲಿಷ್ ನ "TERRORISM" ಎಂಬ ಪದಕ್ಕೆ ಸಮಾನವಾದದ್ದು. ಇಂಗ್ಲಿಷ್ ನ TERRORISM ಎಂಬ ಪದವು ಲ್ಯಾಟಿನ್ ಭಾಷೆಯ"  ಟೆರೆರೆ"  ಎಂಬ ಪದದಿಂದ ಬಂದಿದೆ.   ಟೆರೆರೆ ಎಂದರೆ ಭಯಹುಟ್ಟಿಸು ಎಂದರ್ಥ.

ಭಯೋತ್ಪಾದನೆಯ ವ್ಯಾಖ್ಯಾನಗಳು
"ಸಂಘಟಿತ ಸಮೂಹವು ಘೋಷಿತ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಹಿಂಸಾಚಾರದ ಕ್ರಮಬದ್ಧ ಚಟುವಟಿಕೆಗಳನ್ನು ಅನುಸರಿಸುವುದೇ ಭಯೋತ್ಪಾದನೆ "

"ರಾಜಕೀಯ ಉದ್ದೇಶದಿಂದ ಕೂಡಿರುವ ಸಾಮೂಹಿಕ ಸ್ವರೂಪದ ಹಿಂಸಾಚಾರವೇ ಭಯೋತ್ಪಾದನೆ. "

"ಭಯೋತ್ಪಾದನೆಯು ಮುಗ್ಧ ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಇಡಿ ಜನಸಮುದಾಯದಲ್ಲಿ ಭಯವನ್ನು ಹುಟ್ಟಿಸುವುದಾಗಿದೆ ಹಾಗೂ ಇದು ರಾಜಕೀಯ ಪ್ರೇರಿತವಾಗಿರುತ್ತದೆ. "

ಭಯೋತ್ಪಾದನೆಗೆ ಕಾರಣಗಳು

  • ತ್ವರಿತ ಜನಸಂಖ್ಯಾ ಬೆಳವಣಿಗೆ
  • ರಾಜಕೀಯ, ಸಾಮಾಜಿಕ, ಆರ್ಥಿಕ ಸಮಸ್ಯೆಗಳು
  • ಸಾಮಾಜಿಕ ಜಾಗೃತಿ ಇಲ್ಲದಿರುವುದು
  • ದೇಶದ ವ್ಯವಸ್ಥೆಯಲ್ಲಿ ಜನರ ಅಸಮಾಧಾನ
  • ಅಂಧ ಧಾರ್ಮಿಕ, ಜಾತಿ ನಂಬಿಕೆಗಳು
  • ಅನ್ಯಧರ್ಮದ ಬಗ್ಗೆ ಸಹನೆ ಇಲ್ಲದಿರುವುದು
  • ರಾಜಕೀಯ  ಉದ್ದೇಶ ಈಡೇರಿಕೆ
  • ಭ್ರಷ್ಟಾಚಾರ
  • ವರ್ಣಭೇದ ನೀತಿ
  • ಆರ್ಥಿಕ ಅಸಮಾನತೆ
  • ಭಾಷಾ ವ್ಯತ್ಯಾಸಗಳು
  • ನಿರುದ್ಯೋಗ
  • ದುಡ್ಡಿನ ಆಮಿಷ
  • ಪೋಷಕರ ನಿರ್ಲಕ್ಷ್ಯ
  • ಬಡತನ

ಭಯೋತ್ಪಾದನೆಯ ವಿವಿಧ ಆಯಾಮಗಳು

  • ಬಾಂಬ್ ಸ್ಪೋಟ
  • ಸಾಮೂಹಿಕ ಹತ್ಯೆ ನಡೆಸುವುದು
  • ರಾಜಕೀಯ ವ್ಯಕ್ತಿಗಳ ಅಪಹರಣ
  • ಸಂಪತ್ತನ್ನು ದೋಚುವುದು
  • ಲೈಂಗಿಕ ಶೋಷಣೆ 
  • ಒತ್ತೆಯಾಳುಗಳನ್ನಾಗಿಸುವುದು

ಭಯೋತ್ಪಾದನೆಯ ಪರಿಣಾಮಗಳು
ಭಯೋತ್ಪಾದನೆ ಜನರಲ್ಲಿ ಭಯವನ್ನು ಹರಡುತ್ತದೆ.  ಭಯೋತ್ಪಾದಕ ದಾಳಿಯಿಂದಾಗಿ, ಲಕ್ಷಾಂತರ ಸರಕುಗಳು ನಾಶವಾಗುತ್ತವೆ, ಸಾವಿರಾರು ಮುಗ್ಧ ಜನರ ಪ್ರಾಣ ಕಳೆದುಹೋಗುತ್ತದೆ, ಪ್ರಾಣಿಗಳು ಸಹ ಕೊಲ್ಲಲ್ಪಡುತ್ತವೆ. ಭಯೋತ್ಪಾದಕ ಚಟುವಟಿಕೆಯನ್ನು ನೋಡಿದ ನಂತರ ಮಾನವೀಯತೆಯ ಮೇಲಿನ ಅಪನಂಬಿಕೆ ಹುಟ್ಟುತ್ತದೆ, ಇದು ಇನ್ನೊಬ್ಬ ಭಯೋತ್ಪಾದಕನಿಗೆ ಜನ್ಮ ನೀಡುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ವಿವಿಧ ರೀತಿಯ ಭಯೋತ್ಪಾದನೆ ಅಸ್ತಿತ್ವದಲ್ಲಿದೆ. ಭಯೋತ್ಪಾದನೆಯ ಪರಿಣಾಮಗಳನ್ನು ಪಟ್ಟಿ ಮಾಡುವುದಾದರೆ,

  • ಆಸ್ತಿ ಹಾನಿ
  • ಹಿಂಸಾಚಾರ
  • ಸಮಾಜದಲ್ಲಿ ಆತಂಕ
  • ಪ್ರಾಣ ಹಾನಿ
  • ಕೋಮುಗಲಭೆ
  • ಪ್ರಜಾಪ್ರಭುತ್ವಕ್ಕೆ ಆಶಯಕ್ಕೆ ಹಾನಿ
  • ಸರ್ಕಾರ ದುರ್ಬಲಗೊಳ್ಳುವುದು
  • ಜಾಗತಿಕ ಯುದ್ದಗಳಿಗೆ ಬುನಾದಿ
  • ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ
  • ಅಭಿವೃದ್ಧಿ ಕುಂಠಿತಗೊಳ್ಳುವಿಕೆ

ಭಾರತದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಸ್ಥೆಗಳು
ಭಾರತದಲ್ಲಿ ಅನೇಕ ಪೊಲೀಸ್, ಗುಪ್ತಚರ ಮತ್ತು ಮಿಲಿಟರಿ ಸಂಸ್ಥೆಗಳು ಮತ್ತು ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ವಿಶೇಷ ಸಂಸ್ಥೆಗಳಿವೆ.

  • ಭಯೋತ್ಪಾದನಾ ನಿಗ್ರಹ ದಳ (ATS)
  • ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) 
  • ರಾಷ್ಟ್ರೀಯ ತನಿಖಾ ಸಂಸ್ಥೆ (NIA)

ಪರಿಹಾರ ಕ್ರಮಗಳು

  • ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಾಶಪಡಿಸುವುದು
  • ಜನರಲ್ಲಿ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
  • ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
  • ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವುದು
  • ಸೂಕ್ತ ತರಬೇತಿ ಪಡೆದ ನುರಿತ ಸೈನಿಕರನ್ನು ನೇಮಿಸಿಕೊಳ್ಳುವುದು
  • ಸಾರ್ವಜನಿಕ ಸ್ಥಳಗಳಿಗೆ ಹಾಗೂ ಗಣ್ಯವ್ಯಕ್ತಿಗಳಿಗೆ ಭದ್ರತೆ ಕಲ್ಪಿಸುವುದು



ಉಪಸಂಹಾರ:
ಭಯೋತ್ಪಾದನೆ ಜಾಗತಿಕ ಬೆದರಿಕೆಯಾಗಿ ಮಾರ್ಪಟ್ಟಿದೆ, ಇದನ್ನು ಆರಂಭಿಕ ಹಂತದಿಂದ ನಿಯಂತ್ರಿಸಬೇಕಾಗಿದೆ. ಭಯೋತ್ಪಾದನೆಯನ್ನು ಕಾನೂನು ಜಾರಿ ಸಂಸ್ಥೆಗಳಿಂದ ಮಾತ್ರ ನಿಯಂತ್ರಿಸಲಾಗುವುದಿಲ್ಲ. ಭಯೋತ್ಪಾದನೆ ನಿಗ್ರಹ ದಿನ - ಮೇ 21 ರಂದು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯುತ್ತಿದೆ. ಹೆಚ್ಚುತ್ತಿರುವ ಈ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ವಿಶ್ವದ ಜನರು ಒಂದಾಗಿ ಹೋರಾಡಬೇಕು.

Click here to Download pdf file

No comments:

Post a Comment