The Earth does not belong to man; Man belongs to the Earth
ಇಂದು ವಿಶ್ವವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಅದು ಜಾಗತಿಕ ತಾಪಮಾನ ಏರಿಕೆ. ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದ ಉಷ್ಣತೆ ಹೆಚ್ಚಾಗುವ ಸಂಭವವಿದೆ. ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ, ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು. ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂಮಿಯ ಮೇಲ್ಮೈ ತಾಪವನ್ನು ಕ್ರಮೇಣ ಹೆಚ್ಚಿಸುವುದಕ್ಕೆ ಹಸಿರುಮನೆ ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು.
ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯ (IPCC) ಪ್ರಕಾರ ಇಂಧನಗಳ ಅತಿಯಾದ ಬಳಕೆ ಮತ್ತು ಅರಣ್ಯನಾಶಗಳಂತಹ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತಿಳಿಸಿದೆ. ಭೂಮಿಯ ಸರಾಸರಿ ಉಷ್ಣತೆಯು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ. ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.
ಹಸಿರು ಮನೆ ಅನಿಲಗಳು :
- ನೀರಿನ ಆವಿ (H2O)
- ಕಾರ್ಬನ್ ಡೈಆಕ್ಸೈಡ್ (CO2)
- ಮೀಥೇನ್ (CH4)
- ನೈಟ್ರಸ್ ಆಕ್ಸೈಡ್ (N2O)
- ಓಝೊನ್ (O3)
ಜಾಗತಿಕ ತಾಪಮಾನ ಏರಿಕೆಯ ಕಾರಣಗಳು
- ನೈಸರ್ಗಿಕ ಕಾರಣಗಳು
- ಮಾನವ ಕೃತ್ಯಗಳು
ಜಾಗತಿಕ ತಾಪಮಾನ ಏರಿಕೆಯ ನೈಸರ್ಗಿಕ ಕಾರಣಗಳು
ಹವಾಮಾನವು ಶತಮಾನಗಳಿಂದ ನಿರಂತರವಾಗಿ ಬದಲಾವಣೆಯಾಗುತ್ತಿದೆ. ಸೂರ್ಯನ ನೈಸರ್ಗಿಕ ವಾಲುವಿಕೆಯು ಸೂರ್ಯನ ಬೆಳಕಿನ ತೀವ್ರತೆಯನ್ನು ಬದಲಾಯಿಸುತ್ತದೆ ಮತ್ತು ಭೂಮಿಗೆ ಹತ್ತಿರವಾಗುತ್ತದೆ ಇದರಿಂದ ಭೂಮಿಯ ಉಷ್ಣತೆ ಹೆಚ್ಚುತ್ತದೆ.
ಜಾಗತಿಕ ತಾಪಮಾನದ ಮತ್ತೊಂದು ಕಾರಣವೆಂದರೆ ಹಸಿರುಮನೆ ಅನಿಲಗಳು. ಹಸಿರುಮನೆ ಅನಿಲಗಳು ಇಂಗಾಲದ ಮೊನಾಕ್ಸೈಡ ಮತ್ತು ಸಲ್ಫರ್ ಡೈಆಕ್ಸೈಡ್ ಇದು ಸೌರ ಶಾಖ ಕಿರಣಗಳನ್ನು ಭೂಮಿಯ ಮೇಲ್ಮೈಯಿಂದ ತಪ್ಪಿಸಿಕೊಳ್ಳದಂತೆ ತಡೆಯುತ್ತದೆ. ಇದು ಭೂಮಿಯ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ.
ಜ್ವಾಲಾಮುಖಿ ಸ್ಫೋಟಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಮತ್ತೊಂದು ವಿದ್ಯಮಾನ. ಒಂದು ಜ್ವಾಲಾಮುಖಿ ಸ್ಫೋಟವು ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಮತ್ತು ಬೂದಿಯನ್ನು ಬಿಡುಗಡೆ ಮಾಡುತ್ತದೆ. ಇಂಗಾಲದ ಡೈಆಕ್ಸೈಡ್ ಹೆಚ್ಚಿದಂತೆ ಭೂಮಿಯ ಉಷ್ಣತೆಯು ಹೆಚ್ಚಾಗುತ್ತದೆ.
ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಮತ್ತೊಂದು ಅನಿಲವೆಂದರೆ ಅದು ಮೀಥೇನ್. ಇಂಗಾಲದ ಡೈಆಕ್ಸೈಡ್ ಗಿಂತ 20 ಪಟ್ಟು ಹೆಚ್ಚು ಶಾಖವನ್ನು ತಡೆ ಹಿಡಿಯುವ ಸಾಮರ್ಥ್ಯವನ್ನು ಮೀಥೇನ್ ಹೊಂದಿದೆ. ಸಾಮಾನ್ಯವಾಗಿ ಮೀಥೇನ್ ಜಾನುವಾರು, ಭೂಕುಸಿತ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಘಟಕ, ಕಲ್ಲಿದ್ದಲು ಗಣಿಗಾರಿಕೆ, ಅಥವಾ ಕೈಗಾರಿಕಾ ತ್ಯಾಜ್ಯದಿಂದ ಬಿಡುಗಡೆಗೊಳ್ಳುತ್ತದೆ.
ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು
ಜಾಗತಿಕ ತಾಪಮಾನ ಏರಿಕೆಯ ಮೇಲೆ ಮಾನವ ಕೃತ್ಯಗಳ ಪ್ರಭಾವ
ಮಾನವ ಕೃತ್ಯಗಳು ಪರಿಸರದ ಮೇಲೆ ಬಹಳ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಮಾನವನ ಆಧುನಿಕ ಜೀವನಶೈಲಿಯಿಂದಾಗಿ ಭೂಮಿಯು ಪರಿಸರ ಹಲವು ವರ್ಷಗಳಿಂದ ವೇಗವಾಗಿ ಬದಲಾಗುತ್ತಿದೆ. ಮಾನವ ಚಟುವಟಿಕೆಗಳಲ್ಲಿ ಕೈಗಾರಿಕಾ ಉತ್ಪಾದನೆ, ಪಳೆಯುಳಿಕೆ ಇಂಧನ ಸುಡುವಿಕೆ, ಗಣಿಗಾರಿಕೆ, ಜಾನುವಾರು ಸಾಕಣೆ ಮತ್ತು ಅರಣ್ಯನಾಶ ಸೇರಿವೆ. ಕೈಗಾರಿಕೆಗಳ ಜೊತೆಗೆ, ಸಾರಿಗೆ ವಾಹನಗಳು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಿದೆ.
ಜಾಗತಿಕ ತಾಪಮಾನ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಅರಣ್ಯ ನಾಶ. ಮಾನವನು ಕಾಗದಗಳನ್ನು ತಯಾರಿಸಲು, ಮನೆಗಳನ್ನು ನಿರ್ಮಿಸಲು ಮರಗಳನ್ನು ಕಡಿಯುತ್ತಿದ್ದಾನೆ. ಮಾನವ ನಿರಂತರ ಅರಣ್ಯನಾಶ ಮಾಡಿದರೆ ಇಂಗಾಲದ ಡೈಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೇರಳವಾಗುತ್ತದೆ, ಏಕೆಂದರೆ ಮರಗಳು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ.
ಹಸಿರುಮನೆ ಅನಿಲಗಳು ನೂರಾರು ವರ್ಷಗಳವರೆಗೆ ವಾತಾವರಣದಲ್ಲಿ ಉಳಿಯುತ್ತವೆ. ಜಾಗತಿಕ ತಾಪಮಾನವು ಭೂಮಿಯ ಮೇಲೆ ಉಂಟುಮಾಡುವ ಪರಿಣಾಮವು ಅತ್ಯಂತ ಗಂಭೀರವಾಗಿದೆ. ಜಾಗತಿಕ ತಾಪಮಾನ ಏರಿಕೆಯು ಮುಂದುವರಿದರೆ ಭವಿಷ್ಯದಲ್ಲಿ ಅನೇಕ ದುಷ್ಪರಿಣಾಮಗಳು ಸಂಭವಿಸುತ್ತವೆ.
ಮೊದಲ ಪರಿಣಾಮವೆಂದರೆ ಧ್ರುವೀಯ ಮಂಜುಗಡ್ಡೆ ಕರಗುವುದು. ತಾಪಮಾನ ಹೆಚ್ಚಾದಂತೆ ಧ್ರುವದಲ್ಲಿನ ಮಂಜುಗಡ್ಡೆ ಕರಗುತ್ತದೆ. ಮಂಜುಗಡ್ಡೆ ಕರಗುವಿಕೆಯ ಮೊದಲ ಪರಿಣಾಮ ಸಮುದ್ರ ಮಟ್ಟದಲ್ಲಿ ಹೆಚ್ಚಳ. ಏಕೆಂದರೆ ಕರಗುವ ಹಿಮನದಿಗಳು ಸಾಗರಗಳಾಗಿ ಮಾರ್ಪಡುತ್ತವೆ. ಸಮುದ್ರ ಮಟ್ಟದ ಹೆಚ್ಚಳದಿಂದ ಅನೇಕ ದ್ವೀಪಗಳು ಮತ್ತು ಸಮುದ್ರ ತೀರದ ನಗರಗಳು ಮುಳುಗಡೆಯಾಗಿ ಭೂಮಿಯ ನಕ್ಷೆಯೆ ಬದಲಾಗುತ್ತದೆ.
ಮತ್ತೊಂದು ಪರಿಣಾಮವೆಂದರೆ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿವರ್ಗಗಳ ಆವಾಸಸ್ಥಾನದ ನಷ್ಟ. ಹಿಮಕರಡಿಗಳು ಮತ್ತು ಉಷ್ಣವಲಯದ ಕಪ್ಪೆಗಳ ಪ್ರಭೇದಗಳು ಹವಾಮಾನ ಬದಲಾವಣೆಯಿಂದಾಗಿ ನಿರ್ನಾಮವಾಗುತ್ತವೆ. ಅನೇಕ ಪ್ರಾಣಿ ಪಕ್ಷಿಗಳು ವಲಸೆ ಹೋಗುತ್ತವೆ.
ಜಾಗತಿಕ ತಾಪಮಾನದಿಂದ ಹೆಚ್ಚು ಚಂಡಮಾರುತಗಳು ಸಂಭವಿಸುತ್ತವೆ. ಚಂಡಮಾರುತದಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗುತ್ತದೆ. ಸರ್ಕಾರವು ಶತಕೋಟಿ ರೂಗಳನ್ನು ಪುನರ್ವಸತಿಗೆ ವ್ಯಯಿಸಬೇಕಾಗುತ್ತದೆ. ಅದಲ್ಲದೆ ಅಪಾರ ಪ್ರಾಣ ಹಾನಿ ಮತ್ತು ಗಂಭೀರ ಖಾಯಿಲೆಗಳು ಜನರನ್ನು ಭಾದಿಸುತ್ತವೆ.
ಜಾಗತಿಕ ತಾಪಮಾನ ಏರಿಕೆ ತಡೆಯಲು ಪರಿಹಾರ
ಜನತೆ ಮತ್ತು ಸರ್ಕಾರ ಜಾಗತಿಕ ತಾಪಮಾನ ಪರಿಹಾರಗಳನ್ನು ಕಾರ್ಯಗತಗೊಳಿಸಲು ಮುಂದೆ ಬರಬೇಕಿದೆ. ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡಲು ನಾವು ವಾತಾವರಣಕ್ಕೆ ಸೇರಿಸುವ ಹಸಿರುಮನೆ ಅನಿಲಗಳ ಪ್ರಮಾಣ ಕಡಿಮೆ ಮಾಡಬೇಕು. ನಾವು ಅತಿಯಾಗಿ ಬಳಸುವ ಗ್ಯಾಸೋಲಿನ್, ವಿದ್ಯುತ್ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ನಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು.
ಗ್ಯಾಸೋಲಿನ್ ಕಡಿಮೆ ಬಳಸುವ ಹೈಬ್ರಿಡ್ ಕಾರನ್ನು ಆಯ್ಕೆ ಮಾಡುವುದು. ಗ್ಯಾಸೋಲಿನ್ ಅನ್ನು ಕಡಿಮೆ ಬಳಸುವ ಇನ್ನೊಂದು ಮಾರ್ಗವೆಂದರೆ ಸಾರ್ವಜನಿಕ ಸಾರಿಗೆ ಅಥವಾ ಕಾರ್‌ಪೂಲ್ ಬಳಸುವುದು. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ವೆಚ್ಚವನ್ನು ತಗ್ಗಿಸಲು ಸಹಾಯ ಮಾಡುತ್ತದೆ.
ಒಣ ಎಲೆಗಳನ್ನು, ಪ್ಲಾಸ್ಟಿಕ್ ಮತ್ತು ಕಸವನ್ನು ಸುಡುವುದು ನಿಲ್ಲಿಸಬೇಕು. ಪ್ಲಾಸ್ಟಿಕ್‌ನೊಂದಿಗೆ ಕಸವನ್ನು ಸುಟ್ಟರೆ ಅದು ಇಂಗಾಲದ ಡೈಆಕ್ಸೈಡ್ ಮತ್ತು ವಿಷಾನಿಲ ಬಿಡುಗಡೆ ಮಾಡುತ್ತದೆ. ಸರ್ಕಾರವು ಅರಣ್ಯನಾಶವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.
ಉಪಸಂಹಾರ :
ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಭೂಮಿಯು ಮೊದಲಿನಂತಿಲ್ಲ ಎಂಬ ಸತ್ಯವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಭೂಮಿಗೆ ಚಿಕಿತ್ಸೆಯ ಅಗತ್ಯವಿದೆ. ಭವಿಷ್ಯದ ಪೀಳಿಗೆಯ ಸಂಕಷ್ಟವನ್ನು ತಡೆಗಟ್ಟಲು ಜಾಗತಿಕ ತಾಪಮಾನ ಏರಿಕೆ ಕಡಿತಗೊಳಿಸುವ ಜವಾಬ್ದಾರಿಯನ್ನು ಪ್ರಸ್ತುತ ಪೀಳಿಗೆ ವಹಿಸಿಕೊಳ್ಳಬೇಕು. ಆದ್ದರಿಂದ, ಪ್ರತಿ ಹೆಜ್ಜೆ ಎಷ್ಟೇ ಸಣ್ಣದಾದರೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸುವಲ್ಲಿ ಸಾಕಷ್ಟು ಮಹತ್ವದ್ದಾಗಿದೆ.
No comments:
Post a Comment