Saturday 30 November 2019

ಭಾರತದ ಮೊದಲಿಗರು



  • ಭಾರತ ಪ್ರಥಮ ಪ್ರಧಾನಮಂತ್ರಿ - ಜವಹರಲಾಲ್ ನೆಹರು 
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮುಸ್ಲಿಂ ಅಧ್ಯಕ್ಷ - ಬದರುದ್ದೀನ್ ತ್ಯಾಬ್ಜಿ
  • ರಾಜ್ಯ ಸಭೆಗೆ ಆಯ್ಕೆಯಾದ ಮೊದಲ ಚಿತ್ರನಟಿ - ನರ್ಗಿಸ್ ದತ್
  • ಸ್ವಾತಂತ್ರದ ನಂತರ ಪ್ರಥಮ ಗವರ್ನರ್ ಜನರಲ್ - ಲಾರ್ಡ್ ಮೌಂಟ್ ಬ್ಯಾಟನ್ 
  • ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಪ್ರಥಮ ಭಾರತೀಯ ಮಹಿಳೆ - ಸರೋಜಿನಿ ನಾಯ್ಡು (1925, ಕಾನ್ಪುರ್)
  • ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು - ಅನಿಬೆಸೆಂಟ್ (1917, ಕಲ್ಕತ್ತಾ)
  • ಮೌಂಟ್ ಎವರೆಸ್ಟ ಏರಿದ ಪ್ರಥಮ ಮಹಿಳೆ - ಬಚೇಂದ್ರಿ ಪಾಲ್ (1984)
  • ಪ್ರಥಮ ಮಹಿಳಾ ವೈದ್ಯರು - ಕದಂಬಿನಿ ಗಂಗೂಲಿ 
  • ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ವಿಜೇತೆ - ದೇವಿಕಾರಾಣಿ (1969) 
  • ಮೊದಲ ಫೀಲ್ಡ್ ಮಾರ್ಷಲ್ - ಮಾಣಿಕ್ ಷಾ
  • ಭಾರತದ ಮೊದಲ ಮುಖ್ಯ ಕಮಾಂಡರ್ - ಜನರಲ್ ಕೆ. ಎಮ್.  ಕಾರಿಯಪ್ಪ
  • ಅಶೋಕ ಚಕ್ರ ಪುರಸ್ಕೃತ ಪ್ರಥಮ ಮಹಿಳೆ - ನೀರಜಾ ಭಾನೋಟ್(1987)
  • ಭಾರತದ ಮೊದಲ ಮುಖ್ಯ ನ್ಯಾಯಾಧೀಶರು - ಹೆಚ್. ಜೆ. ಕಾನಿಯ 
  • ಭಾರತದ ಮೊದಲ ಉಪರಾಷ್ಟ್ರಪತಿ - ಡಾ. ಎಸ್. ರಾಧಾಕೃಷ್ಣನ್
  • ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿ - ಝಾಕೀರ ಹುಸೇನ್
  • ಭಾರತದ ಮೊದಲ ಸಿಖ್ ರಾಷ್ಟ್ರಪತಿ - ಗ್ಯಾನಿ ಜೇಲ್‌ಸಿಂಗ್‌
  • ವಾಯು ಪಡೆಯ ಮುಖ್ಯಸ್ಥರಾದ ಮೊದಲ ಭಾರತೀಯ - ಸುಬ್ರತೋ ಮುಖರ್ಜಿ
  • ನೌಕಾಪಡೆಯ ಮುಖ್ಯಸ್ಥರಾದ ಮೊದಲ ಭಾರತೀಯ - ಆರ್. ಡಿ. ಕೊಠಾರಿ 
  • ಬ್ರಿಟೀಷ್ ಸಂಸತ್ತಿನ ಸದಸ್ಯನಾದ ಪ್ರಥಮ ಭಾರತೀಯ - ದಾದಾಬಾಯಿ ನವರೋಜಿ 
  • ಹೈಕೋರ್ಟ್ ನ್ಯಾಯಾಧೀಶರಾದ ಪ್ರಥಮ ಭಾರತೀಯ - ಸೈಯದ್ ಮಹ್ಮದ್ 
  • ವಿಮಾನ ಚಾಲನೆ ಮಾಡಿದ ಮೊದಲ ಭಾರತೀಯ - ಜೆ. ಆರ್. ಡಿ. ಟಾಟಾ 
  • ಇಂಗ್ಲೆಂಡಿಗೆ ಭೇಟಿ ನೀಡಿದ ಮೊದಲ ಭಾರತೀಯ - ರಾಜಾರಾಮ ಮೋಹನರಾಯ (1832)
  • ರಾಜ್ಯ ಸಭೆಯ ಮೊದಲ ಅಧ್ಯಕ್ಷರು – ಡಾ. ಎಸ್. ರಾಧಾಕೃಷ್ಣನ್
  • ಲೋಕಸಭೆಯಲ್ಲಿ ಮಹಾಭಿಯೋಗ ಎದುರಿಸಿದ ಮೊದಲ ನ್ಯಾಯಾಧೀಶರು - ವಿ ರಾಮಸ್ವಾಮಿ (1993)
  • ಭಾರತದ ಪ್ರಥಮ ವೈಸರಾಯ್ - ಲಾರ್ಡ ಕ್ಯಾನಿಂಗ್
  • ಭಾರತದ ಪ್ರಥಮ ಪತ್ರಿಕೆ - ಬೆಂಗಾಲ ಗೆಜೆಟ್ (1780) 
  • ಇಂಗ್ಲೀಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಮೊದಲಿಗ - ಮಿಹಿರ್ ಸೇನ್
  • ICS ಹುದ್ದೆಗೆ ಸೇರಿದ ಮೊದಲ ಭಾರತೀಯ - ಸತ್ಯೇಂದ್ರನಾಥ ಟ್ಯಾಗೋರ್
  • ನೊಬೆಲ್ ಪ್ರಶಸ್ತಿ ಪಡೆದ ಮೊದಲಿಗ ಭಾರತೀಯ - ರವೀಂದ್ರನಾಥ ಟ್ಯಾಗೋರ್ (1913) (ಕೃತಿ - ಗೀತಾಂಜಲಿ) 
  • ಅಂತರಿಕ್ಷಯಾನ ಮಾಡಿದ ಪ್ರಥಮ ಭಾರತೀಯ - ರಾಕೇಶ ಶರ್ಮಾ (1984)
  • ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗವರ್ನರ್ ಜನರಲ್ - ಸಿ. ರಾಜಗೋಪಾಲಚಾರಿ
  • ಭಾರತದ ಪ್ರಥಮ ರಾಷ್ಟ್ರಪತಿಗಳು - ಡಾ. ರಾಜೇಂದ್ರ ಪ್ರಸಾದ್ 
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಥಮ ಅಧಿವೇಶನದ ಅಧ್ಯಕ್ಷರು - ಉಮೇಶ ಚಂದ್ರ ಬ್ಯಾನರ್ಜಿ (1885)

Friday 29 November 2019

ಪ್ರಬಂಧ: ಚುನಾವಣಾ ಸುಧಾರಣೆಗಳು



ಭಾರತದಲ್ಲಿ ಚುನಾವಣಾ ಸುಧಾರಣೆಗಳು
          ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ. ಪ್ರಜಾಪ್ರಭುತ್ವ  ವ್ಯವಸ್ಥೆಯಲ್ಲಿ ಚುನಾವಣೆಗಳು ಅವಿಭಾಜ್ಯ ಮತ್ತು ಅತ್ಯಂತ ಪ್ರಮುಖ ಪ್ರಕ್ರಿಯೆ. ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆದಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸಲು ಸಾಧ್ಯ.


ಭಾರತದಲ್ಲಿ ಚುನಾವಣಾ ವ್ಯವಸ್ಥೆಯ ಸಮಸ್ಯೆಗಳು
ಭಾರತದ ಚುನಾವಣಾ ಪ್ರಕ್ರಿಯೆಗೆ ಕಳಂಕ ತರುವ ಅನೇಕ ಸಮಸ್ಯೆಗಳಿವೆ. ಕೆಲವು
ಪ್ರಮುಖವಾದವುಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.


  • ಹಣ ಬಲ: ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರ ಮತ್ತು ಆಮಿಷ ನೀಡಲು  ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಹೆಚ್ಚಿನ ಅಭ್ಯರ್ಥಿಗಳು ಅನುಮತಿಸಿರುವ ಖರ್ಚಿನ ಮಿತಿಯನ್ನು ಮೀರಿ ಹಣದ ಹೊಳೆ ಹರಿಸುತ್ತಾರೆ.
  • ತೋಳ್ಬಲ : ದೇಶದ ಕೆಲವು ಕಡೆ ಮತದಾನದ ಸಮಯದಲ್ಲಿ ಹಿಂಸಾಚಾರ, ಬೆದರಿಕೆ, ಮತಗಟ್ಟೆ ಅತಿಕ್ರಮ ಪ್ರವೇಶ  ಮುಂತಾದ ಅಕ್ರಮ ಹಾಗೂ ಅಹಿತಕರ ಘಟನೆ ನಡೆದ ಬಗ್ಗೆ ವ್ಯಾಪಕ ವರದಿಗಳಿವೆ.
  • ರಾಜಕೀಯದ ಅಪರಾಧೀಕರಣ ಮತ್ತು ಅಪರಾಧಿಗಳ ರಾಜಕೀಯ: ಹಣ ಮತ್ತು ತೋಳ್ಬಲದಿಂದ ಚುನಾವಣೆಯಲ್ಲಿ ಗೆದ್ದು ಅಪರಾಧಿಗಳು ರಾಜಕೀಯಕ್ಕೆ ಪ್ರವೇಶಿಸುತ್ತಾರೆ, ಇದರಿಂದಾಗಿ ಅವರ ವಿರುದ್ಧದ ಪ್ರಕರಣಗಳ ವಿಚಾರಣೆ ಸ್ಥಗಿತಗೊಳ್ಳುತ್ತದೆ. ರಾಜಕೀಯ ಪಕ್ಷಗಳು ಹಣಕ್ಕಾಗಿ  ಅಪರಾಧಿಗಳನ್ನು ಚುನಾವಣಾ ಕಣಕ್ಕಿಳಿಸಿ ಅದರ ಪ್ರತಿಯಾಗಿ ಅವರಿಗೆ ರಾಜಕೀಯ ಪ್ರೋತ್ಸಾಹ ಮತ್ತು ರಕ್ಷಣೆ ನೀಡುತ್ತವೆ.
  • ಸರ್ಕಾರಿ ಮೂಲಸೌಕರ್ಯಗಳ ದುರುಪಯೋಗ : ಅಧಿಕಾರದಲ್ಲಿರುವ ಪಕ್ಷಗಳು ಸರ್ಕಾರಿ ವಾಹನಗಳನ್ನು ಪ್ರಚಾರ ಮಾಡಲು ಬಳಸುವುದು, ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಜಾಹೀರಾತುಗಳು ನೀಡುವುದು, ಇದಲ್ಲದೆ ಇನ್ನಿತರ ಮಾರ್ಗಗಳ ಮೂಲಕ ತಮ್ಮ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಳ್ಳುವುದು.
  • ಸ್ವತಂತ್ರ ಅಭ್ಯರ್ಥಿಗಳ ಮೂಲಕ ಮತ ವಿಭಜನೆ : ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಸ್ವತಂತ್ರ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುವ ಮೂಲಕ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಗೆ ಹೋಗಬಹುದಾದ ಮತಗಳನ್ನು ವಿಭಜಿಸಿ ಗೆಲ್ಲುವ ಹುನ್ನಾರ ನಡೆಸುವುದು.
  • ಜಾತಿವಾದ: ಕೆಲವು ಜಾತಿ ಸಮುದಾಯಗಳು ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಬಲವಾದ ಬೆಂಬಲವನ್ನು ನೀಡಿದ ಪ್ರಕರಣಗಳಿವೆ. ಹೀಗಾಗಿ, ರಾಜಕೀಯ ಪಕ್ಷಗಳು ವಿಭಿನ್ನ ಜಾತಿ ಸಮುದಾಯಗಳ ಮನವೊಲಿಸಲು ಜಾತಿ ಆಧಾರಿತ ವಿವಿಧ ಕೊಡುಗೆಗಳನ್ನು ನೀಡುತ್ತವೆ. ಪ್ರಬಲ  ಜಾತಿ ಸಮುದಾಯವು ತಮ್ಮ ಜಾತಿಯ ಅಭ್ಯರ್ಥಿಗೆ  ಚುನಾವಣೆಯ ಟಿಕೆಟ್ ನೀಡುವಂತೆ ಪಕ್ಷಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತವೆ. ಜಾತಿ ಆಧಾರದ ಮೇಲೆ ಮತ ಚಲಾಯಿಸುವ ರೂಢಿ ದೇಶದಲ್ಲಿ ಚಾಲ್ತಿಯಲ್ಲಿದೆ, ಇದು ಪ್ರಜಾಪ್ರಭುತ್ವ ಮತ್ತು ಸಮಾನತೆಯ ತತ್ವಕ್ಕೆ ವಿರೋಧವಾಗಿದೆ. ಇದು ದೇಶದ ಏಕತೆ ಮತ್ತು ಜಾತ್ಯತೀತ  ವಿರೋಧಿಯಾಗಿದೆ.
  • ರಾಜಕೀಯದಲ್ಲಿ ನೈತಿಕ ಮೌಲ್ಯಗಳ ಕೊರತೆ: ಭಾರತದಲ್ಲಿನ ರಾಜಕೀಯ ಭ್ರಷ್ಟಾಚಾರದ ಕೂಪವಾಗಿದೆ. ಹಣ ಸಂಪಾದಿಸಲು ಮತ್ತು ಅಧಿಕಾರದ ದಾಹಕ್ಕಾಗಿ ಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ. ಜನರ ಜೀವನದಲ್ಲಿ ಬದಲಾವಣೆ ತರಲು ಬಯಸಿ ರಾಜಕೀಯಕ್ಕೆ ಪ್ರವೇಶಿಸುವ ನಾಯಕರು ಸಂಖ್ಯೆ ಬಹಳ ಕಡಿಮೆ. ಗಾಂಧಿವಾದಿ ಮೌಲ್ಯಗಳು ಭಾರತೀಯ ರಾಜಕೀಯ ರಂಗದಿಂದ ಕಾಣೆಯಾಗಿವೆ.

ಚುನವಣಾ ಸುಧಾರಣೆಗಳು

2000 ಪೂರ್ವದ ಚುನಾವಣಾ ಸುಧಾರಣೆಗಳು

  • ಮತದಾನದ ವಯಸ್ಸನ್ನು ಕಡಿತಗೊಳಿಸಿದ್ದು: ಸಂವಿಧಾನದ 61 ನೇ ತಿದ್ದುಪಡಿ ಪ್ರಕಾರ ಮತದಾನದ ಕನಿಷ್ಠ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲಾಯಿತು.
  • ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (EVM): ದೆಹಲಿ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಚುನಾವಣೆಗಳಲ್ಲಿ 1998 ರಲ್ಲಿ ಮೊದಲ ಬಾರಿಗೆ  ಇವಿಎಂಗಳನ್ನು ಬಳಸಲಾಯಿತು. ಈಗ ವ್ಯಾಪಕವಾಗಿ ಇವಿಎಂಗಳನ್ನು ಬಳಸಲಾಗುತ್ತಿದ್ದು ಈ ಮೂಲಕ ಮತಗಟ್ಟೆಯ ಅಕ್ರಮಗಳಿಗೆ ಅಂಕುಶ ತರಲಾಗಿದೆ. 
  • ಅಭ್ಯರ್ಥಿಯು ಎರಡಕ್ಕಿಂತ  ಹೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಬಂಧ ವಿಧಿಸಲಾಗಿದೆ.
  • ಮತದಾನದ ದಿನಗಳಲ್ಲಿ ಉದ್ಯೋಗದಾತ ಕಂಪನಿಗಳು ಪಾವತಿ ಸಹಿತ ರಜೆ ನೀಡಬೇಕು ಮತ್ತು ಇದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ.
  • ಚುನಾವಣಾ ಪ್ರಚಾರದ ಅವಧಿಯನ್ನು ಕಡಿಮೆ ಮಾಡಲಾಗಿದೆ.
  • ಮತದಾನದ ಸಮಯದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.
  • ಶಸ್ತ್ರಾಸ್ತ್ರಗಳ ಸಹಿತ ಮತದಾನ ಕೇಂದ್ರಕ್ಕೆ ಅಥವಾ ಹತ್ತಿರ ಹೋಗುವುದನ್ನು ಕಾನೂನಿನ ಅನುಸಾರ ನಿಷೇಧಿಸಲಾಗಿದೆ. ಇದನ್ನು ಮೀರಿದವರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

2000 ನಂತರದ ಚುನಾವಣಾ ಸುಧಾರಣೆಗಳು 

  • ಚುನಾವಣಾ ವೆಚ್ಚದ ಮೇಲೆ ಮಿತಿ: ಪ್ರಸ್ತುತ, ರಾಜಕೀಯ ಪಕ್ಷವು ಚುನಾವಣೆಯಲ್ಲಿ ಅಥವಾ ಅಭ್ಯರ್ಥಿಗೆ ಖರ್ಚು ಮಾಡುವ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಆದರೆ, ಆಯೋಗವು ವೈಯಕ್ತಿಕ ಅಭ್ಯರ್ಥಿಗಳ ಖರ್ಚಿಗೆ ಕಡಿವಾಣ ಹಾಕಿದೆ. ಲೋಕಸಭಾ ಚುನಾವಣೆಗೆ ಇದು  50 - 70 ಲಕ್ಷ ರೂ (ಅವರು ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ರಾಜ್ಯವನ್ನು ಅವಲಂಬಿಸಿ), ಮತ್ತು ವಿಧಾನಸಭಾ ಚುನಾವಣೆಗೆ 20 - 28 ಲಕ್ಷ ರೂ.
  • ಚುನಾವಣಾ ಸಮೀಕ್ಷೆ ಮೇಲಿನ ನಿರ್ಬಂಧ: ಅಂತಿಮ ಹಂತದ ಚುನಾವಣೆ ಮುಗಿದ ನಂತರವೇ ಚುನಾವಣಾ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಸಾರ ಮಾಡಲು 2019 ರ ಲೋಕಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ನಿರೀಕ್ಷಿತ ಫಲಿತಾಂಶದ ಮೇಲೆ ಮತದಾರರು  ದಾರಿ ತಪ್ಪುದಿರಲು ಅಥವಾ ಪೂರ್ವಾಗ್ರಹ ಪೀಡಿತರಾಗುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿತ್ತು.
  • ಅಂಚೆ ಮತಪತ್ರದ ಮೂಲಕ ಮತದಾನ: 2013 ರಲ್ಲಿ ದೇಶದಲ್ಲಿ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯಾಪ್ತಿಯನ್ನು ವಿಸ್ತರಿಸಲು ಚುನಾವಣಾ ಆಯೋಗ ನಿರ್ಧರಿಸಿತು. ಈ ಹಿಂದೆ, ವಿದೇಶಿ ನಿಯೋಗದಲ್ಲಿರುವ ಭಾರತೀಯ ಸಿಬ್ಬಂದಿ ಮತ್ತು ಸೀಮಿತ ರಕ್ಷಣಾ ಸಿಬ್ಬಂದಿಗಳು ಮಾತ್ರ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಬಹುದಿತ್ತು. ಈಗ, ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಬಲ್ಲ ಮತದಾರರ ವರ್ಗವನ್ನು ಆರಕ್ಕೆ ವಿಸ್ತರಿಸಲಾಗಿದೆ.
  • ಜನ ಜಾಗೃತಿ: ಚುನಾವಣಾ ಆಯೋಗದ ಸ್ಥಾಪನಾ ದಿನವಾದ ಜನವರಿ 25 ಅನ್ನು ‘ರಾಷ್ಟ್ರೀಯ ಮತದಾರರ ದಿನ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿದೆ.
  • ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆ, ಸ್ವತ್ತುಗಳು ಇತ್ಯಾದಿಗಳನ್ನು ಘೋಷಿಸುವುದು ಕಡ್ಡಾಯವಾಗಿದೆ ಮತ್ತು ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿಯನ್ನು ನಮೂದಿಸುವುದು ಈಗ ಚುನಾವಣಾ ಅಪರಾಧವಾಗಿದ್ದು, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
  • ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದನ್ನು ಯಾವುದೇ ಸಾರ್ವಜನಿಕರು “C-VIGIL” ಎಂಬ ಅಪ್ಲಿಕೇಶನಲ್ಲಿ ಲೈವ್ ವಿಡಿಯೋ ಮಾಡಿ ನೇರವಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು.
  • “ಚುನಾವಣಾ ಬಾಂಡ್” ಯೋಜನೆ ಜಾರಿಗೆ ತಂದು ರಾಜಕೀಯ ಪಕ್ಷಗಳು ದೇಣಿಗೆಯನ್ನು ಬಾಂಡ್ ಮೂಲಕವೇ ಸಂಗ್ರಹಿಸಲು ಕ್ರಮವಹಿಸಲಾಗಿದೆ. 
  • NOTA ಜಾರಿಗೆ ತರುವ ಮೂಲಕ ಸ್ಪರ್ಧಿಸಿದ ಯಾವುದೇ ಅಭ್ಯರ್ಥಿ ಅರ್ಹನಿಲ್ಲವೆಂದು ಮತದಾರ ತನ್ನ ಹಕ್ಕು ಚಲಾಯಿಸಬಹುದಾಗಿದೆ.
  • VVPAT: ಮತಖಾತ್ರಿಯಂತ್ರ ಎಂಬ ಯಂತ್ರವನ್ನು ಪರಿಚಯಿಸಲಾಗಿದೆ. ಮತದಾರ ಮತ ಚಲಾಯಿಸಿದ ನಂತರ ಯಾವ ಅಭ್ಯರ್ಥಿಗೆ ತನ್ನ ಮತ ಚಲಾವಣೆ ಆಗಿದೆ ಎಂದು ತಿಳಿದುಕೊಳ್ಳಲು ಅವಕಾಶ ಕಲ್ಪಿಸಿದೆ.


ಚುನಾವಣಾ ವ್ಯವಸ್ಥೆಯಲ್ಲಿ ಮಾಡಬೇಕಾದ ಇನ್ನಿತರ ಸುಧಾರಣೆಗಳು 


  • ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಬೇಕು.
  • ಬಹುಪಕ್ಷೀಯ ಪದ್ಧತಿಯ ಪರ್ಯಾಯವಾಗಿ ದ್ವಿ-ಪಕ್ಷ ಪದ್ಧತಿ ಜಾರಿಗೆ ತಂದು, ರಾಜಕೀಯ ಸ್ಥಿರತೆ ಕಾಪಾಡಬೇಕು.
  • ನೋಟಾ (NOTA) ಬಗ್ಗೆ ಪರಿಣಾಮಕಾರಿ ಕ್ರಮಗಳು ಇನ್ನೂ ಜಾರಿಯಾಗಬೇಕಿದೆ.
  • ಏಕಕಾಲಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣೆ ಜರುಗಬೇಕಿದೆ
  • ರಾಜಕೀಯ ನಿವೃತ್ತಿ ಅವಧಿಯನ್ನು ನಿಗದಿ ಪಡಿಸಬೇಕಿದೆ.
  • ಆಯ್ಕೆಯಾದ ಅಭ್ಯರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ.



ಉಪಸಂಹಾರ
ಒಟ್ಟಿನಲ್ಲಿ ಒಂದು ಯಶಸ್ವಿ ಪ್ರಜಾಪ್ರಭುತ್ವ ದೇಶಕ್ಕೆ ಆಧಾರಸ್ತಂಭವಾಗಿರುವ ಚುನಾವಣೆಗಳು ನಿಷ್ಪಕ್ಷಪಾತವಾಗಿ, ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯಬೇಕು. ಪ್ರಜಾಪ್ರಭುತ್ವ ಯಶಸ್ವಿಯಾಗಲು ದೇಶದ ಎಲ್ಲ ನಾಗರಿಕರು ವಿವೇಚನೆಯಿಂದ ಮತ ಚಲಾಯಿಸಿ ಸೂಕ್ತ ಜನಪ್ರತಿನಿಧಿ ಆರಿಸಿ ತರಬೇಕು.



Wednesday 27 November 2019

ಪ್ರಬಂಧ: ಜಾಗತಿಕ ತಾಪಮಾನ ಏರಿಕೆ

The Earth does not belong to man; Man belongs to the Earth

          ಇಂದು ವಿಶ್ವವು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಅದು ಜಾಗತಿಕ ತಾಪಮಾನ ಏರಿಕೆ. ಹಸಿರು ಮನೆ ಅನಿಲಗಳಿಂದ ಪ್ರಮುಖವಾಗಿ ಕಾರ್ಬನ್ ಡೈ ಆಕ್ಸೈಡ ನ ಪ್ರಮಾಣ ಹೆಚ್ಚಿದಂತೆ ಭೂಮಿಯ ವಾತಾವರಣದ ಉಷ್ಣತೆ ಹೆಚ್ಚಾಗುವ ಸಂಭವವಿದೆ. ಪ್ರತಿಫಲನವಾಗುವ ಬೆಳಕನ್ನು ಶಾಖವಾಗಿ ಹಿಡಿದಿಡುವ ಗುಣ ಈ ಅನಿಲಕ್ಕಿದೆ, ಈ ವಿದ್ಯಮಾನಕ್ಕೆ ಹಸಿರುಮನೆ ಪರಿಣಾಮ ಎನ್ನುವರು. ವಾಯುಮಂಡಲದಲ್ಲಿ ಕಾರ್ಬನ್ ಡೈ ಆಕ್ಸೈಡ್ ,ಮಿಥೇನ್ , ನೈಟ್ರೋಜನ್ ಮತ್ತಿತರ ಅನಿಲಗಳು ಗಾಜಿನ ಹಾಗೆ ಸೂರ್ಯ ಕಿರಣಗಳನ್ನು ಭೂಮಿಗೆ ಮರಳಿ ಪ್ರತಿಫಲಿಸಿ ಭೂಮಿಯ ಶಾಖ ಆಚೆ ಹೋಗದಂತೆ ತಡೆದು ಭೂಮಿಯ ಮೇಲ್ಮೈ ತಾಪವನ್ನು ಕ್ರಮೇಣ ಹೆಚ್ಚಿಸುವುದಕ್ಕೆ ಹಸಿರುಮನೆ ಪರಿಣಾಮ / ಜಾಗತಿಕ ತಾಪಮಾನ ಏರಿಕೆ ಎನ್ನುವರು.
          ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯ  (IPCC) ಪ್ರಕಾರ ಇಂಧನಗಳ ಅತಿಯಾದ ಬಳಕೆ ಮತ್ತು  ಅರಣ್ಯನಾಶಗಳಂತಹ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತಿಳಿಸಿದೆ. ಭೂಮಿಯ ಸರಾಸರಿ ಉಷ್ಣತೆಯು ಕಳೆದ ಶತಮಾನದಲ್ಲಿ 0.6 ಸೆ.ನಷ್ಟು ಹೆಚ್ಚಿದೆ. ಇಪ್ಪತ್ತನೇ ಶತಮಾನದಲ್ಲಿ 15 ಸೆಂ.ಮೀ.ನಷ್ಟು ಸಾಗರಗಳ ಮಟ್ಟ ಏರಿದೆ. ನಾವು ಈಗಾಗಲೇ ಶೇ.25ರಷ್ಟು ಅಧಿಕ ಇಂಗಾಲ ಡೈ ಆಕ್ಸೈಡ್ ನ್ನು ವಾತಾವರಣಕ್ಕೆ ತೂರಿದ್ದೇವೆ.

ಹಸಿರು ಮನೆ ಅನಿಲಗಳು :
  • ನೀರಿನ ಆವಿ (H2O)
  • ಕಾರ್ಬನ್ ಡೈಆಕ್ಸೈಡ್ (CO2)
  • ಮೀಥೇನ್ (CH4)
  • ನೈಟ್ರಸ್ ಆಕ್ಸೈಡ್ (N2O)
  • ಓಝೊನ್ (O3)

 ಜಾಗತಿಕ ತಾಪಮಾನ ಏರಿಕೆಯ ಕಾರಣಗಳು
  •  ನೈಸರ್ಗಿಕ ಕಾರಣಗಳು
  •  ಮಾನವ ಕೃತ್ಯಗಳು
ಜಾಗತಿಕ ತಾಪಮಾನ ಏರಿಕೆಯ ನೈಸರ್ಗಿಕ ಕಾರಣಗಳು
          ಹವಾಮಾನವು ಶತಮಾನಗಳಿಂದ ನಿರಂತರವಾಗಿ ಬದಲಾವಣೆಯಾಗುತ್ತಿದೆ. ಸೂರ್ಯನ ನೈಸರ್ಗಿಕ ವಾಲುವಿಕೆಯು ಸೂರ್ಯನ ಬೆಳಕಿನ ತೀವ್ರತೆಯನ್ನು ಬದಲಾಯಿಸುತ್ತದೆ ಮತ್ತು ಭೂಮಿಗೆ ಹತ್ತಿರವಾಗುತ್ತದೆ ಇದರಿಂದ ಭೂಮಿಯ ಉಷ್ಣತೆ ಹೆಚ್ಚುತ್ತದೆ.
          ಜಾಗತಿಕ ತಾಪಮಾನದ ಮತ್ತೊಂದು ಕಾರಣವೆಂದರೆ ಹಸಿರುಮನೆ ಅನಿಲಗಳು. ಹಸಿರುಮನೆ ಅನಿಲಗಳು ಇಂಗಾಲದ ಮೊನಾಕ್ಸೈಡ ಮತ್ತು ಸಲ್ಫರ್ ಡೈಆಕ್ಸೈಡ್ ಇದು ಸೌರ ಶಾಖ ಕಿರಣಗಳನ್ನು  ಭೂಮಿಯ ಮೇಲ್ಮೈಯಿಂದ ತಪ್ಪಿಸಿಕೊಳ್ಳದಂತೆ ತಡೆಯುತ್ತದೆ. ಇದು ಭೂಮಿಯ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ.
         ಜ್ವಾಲಾಮುಖಿ ಸ್ಫೋಟಗಳು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಮತ್ತೊಂದು ವಿದ್ಯಮಾನ. ಒಂದು ಜ್ವಾಲಾಮುಖಿ ಸ್ಫೋಟವು ವಾತಾವರಣಕ್ಕೆ ಇಂಗಾಲದ ಡೈಆಕ್ಸೈಡ್ ಮತ್ತು ಬೂದಿಯನ್ನು ಬಿಡುಗಡೆ ಮಾಡುತ್ತದೆ. ಇಂಗಾಲದ ಡೈಆಕ್ಸೈಡ್ ಹೆಚ್ಚಿದಂತೆ ಭೂಮಿಯ ಉಷ್ಣತೆಯು ಹೆಚ್ಚಾಗುತ್ತದೆ.
          ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಮತ್ತೊಂದು ಅನಿಲವೆಂದರೆ ಅದು  ಮೀಥೇನ್. ಇಂಗಾಲದ ಡೈಆಕ್ಸೈಡ್ ಗಿಂತ 20 ಪಟ್ಟು ಹೆಚ್ಚು  ಶಾಖವನ್ನು ತಡೆ ಹಿಡಿಯುವ ಸಾಮರ್ಥ್ಯವನ್ನು  ಮೀಥೇನ್ ಹೊಂದಿದೆ. ಸಾಮಾನ್ಯವಾಗಿ ಮೀಥೇನ್  ಜಾನುವಾರು, ಭೂಕುಸಿತ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಘಟಕ, ಕಲ್ಲಿದ್ದಲು ಗಣಿಗಾರಿಕೆ, ಅಥವಾ ಕೈಗಾರಿಕಾ ತ್ಯಾಜ್ಯದಿಂದ ಬಿಡುಗಡೆಗೊಳ್ಳುತ್ತದೆ.

ಜಾಗತಿಕ ತಾಪಮಾನ ಏರಿಕೆಯ ಮೇಲೆ ಮಾನವ ಕೃತ್ಯಗಳ ಪ್ರಭಾವ
          ಮಾನವ ಕೃತ್ಯಗಳು ಪರಿಸರದ ಮೇಲೆ ಬಹಳ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಮಾನವನ ಆಧುನಿಕ ಜೀವನಶೈಲಿಯಿಂದಾಗಿ ಭೂಮಿಯು ಪರಿಸರ ಹಲವು ವರ್ಷಗಳಿಂದ ವೇಗವಾಗಿ ಬದಲಾಗುತ್ತಿದೆ. ಮಾನವ ಚಟುವಟಿಕೆಗಳಲ್ಲಿ ಕೈಗಾರಿಕಾ ಉತ್ಪಾದನೆ, ಪಳೆಯುಳಿಕೆ ಇಂಧನ ಸುಡುವಿಕೆ, ಗಣಿಗಾರಿಕೆ, ಜಾನುವಾರು ಸಾಕಣೆ ಮತ್ತು ಅರಣ್ಯನಾಶ ಸೇರಿವೆ. ಕೈಗಾರಿಕೆಗಳ ಜೊತೆಗೆ, ಸಾರಿಗೆ ವಾಹನಗಳು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತಿದೆ.
          ಜಾಗತಿಕ ತಾಪಮಾನ ಏರಿಕೆಗೆ ಮತ್ತೊಂದು ಪ್ರಮುಖ ಕಾರಣ ಅರಣ್ಯ ನಾಶ. ಮಾನವನು ಕಾಗದಗಳನ್ನು ತಯಾರಿಸಲು, ಮನೆಗಳನ್ನು ನಿರ್ಮಿಸಲು ಮರಗಳನ್ನು ಕಡಿಯುತ್ತಿದ್ದಾನೆ. ಮಾನವ ನಿರಂತರ ಅರಣ್ಯನಾಶ ಮಾಡಿದರೆ ಇಂಗಾಲದ ಡೈಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೇರಳವಾಗುತ್ತದೆ, ಏಕೆಂದರೆ ಮರಗಳು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ.
 ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು
           ಹಸಿರುಮನೆ ಅನಿಲಗಳು ನೂರಾರು ವರ್ಷಗಳವರೆಗೆ ವಾತಾವರಣದಲ್ಲಿ ಉಳಿಯುತ್ತವೆ. ಜಾಗತಿಕ ತಾಪಮಾನವು ಭೂಮಿಯ ಮೇಲೆ ಉಂಟುಮಾಡುವ ಪರಿಣಾಮವು ಅತ್ಯಂತ ಗಂಭೀರವಾಗಿದೆ. ಜಾಗತಿಕ ತಾಪಮಾನ ಏರಿಕೆಯು ಮುಂದುವರಿದರೆ ಭವಿಷ್ಯದಲ್ಲಿ ಅನೇಕ ದುಷ್ಪರಿಣಾಮಗಳು ಸಂಭವಿಸುತ್ತವೆ.

          ಮೊದಲ ಪರಿಣಾಮವೆಂದರೆ ಧ್ರುವೀಯ ಮಂಜುಗಡ್ಡೆ ಕರಗುವುದು. ತಾಪಮಾನ ಹೆಚ್ಚಾದಂತೆ ಧ್ರುವದಲ್ಲಿನ ಮಂಜುಗಡ್ಡೆ ಕರಗುತ್ತದೆ. ಮಂಜುಗಡ್ಡೆ ಕರಗುವಿಕೆಯ  ಮೊದಲ ಪರಿಣಾಮ ಸಮುದ್ರ ಮಟ್ಟದಲ್ಲಿ ಹೆಚ್ಚಳ. ಏಕೆಂದರೆ ಕರಗುವ ಹಿಮನದಿಗಳು ಸಾಗರಗಳಾಗಿ ಮಾರ್ಪಡುತ್ತವೆ. ಸಮುದ್ರ ಮಟ್ಟದ ಹೆಚ್ಚಳದಿಂದ ಅನೇಕ ದ್ವೀಪಗಳು ಮತ್ತು ಸಮುದ್ರ ತೀರದ ನಗರಗಳು ಮುಳುಗಡೆಯಾಗಿ ಭೂಮಿಯ ನಕ್ಷೆಯೆ ಬದಲಾಗುತ್ತದೆ.

          ಮತ್ತೊಂದು ಪರಿಣಾಮವೆಂದರೆ ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿವರ್ಗಗಳ ಆವಾಸಸ್ಥಾನದ ನಷ್ಟ. ಹಿಮಕರಡಿಗಳು ಮತ್ತು ಉಷ್ಣವಲಯದ ಕಪ್ಪೆಗಳ ಪ್ರಭೇದಗಳು ಹವಾಮಾನ ಬದಲಾವಣೆಯಿಂದಾಗಿ ನಿರ್ನಾಮವಾಗುತ್ತವೆ. ಅನೇಕ ಪ್ರಾಣಿ ಪಕ್ಷಿಗಳು ವಲಸೆ ಹೋಗುತ್ತವೆ.

          ಜಾಗತಿಕ ತಾಪಮಾನದಿಂದ ಹೆಚ್ಚು ಚಂಡಮಾರುತಗಳು ಸಂಭವಿಸುತ್ತವೆ. ಚಂಡಮಾರುತದಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗುತ್ತದೆ. ಸರ್ಕಾರವು ಶತಕೋಟಿ ರೂಗಳನ್ನು ಪುನರ್ವಸತಿಗೆ ವ್ಯಯಿಸಬೇಕಾಗುತ್ತದೆ. ಅದಲ್ಲದೆ ಅಪಾರ ಪ್ರಾಣ ಹಾನಿ ಮತ್ತು ಗಂಭೀರ ಖಾಯಿಲೆಗಳು ಜನರನ್ನು ಭಾದಿಸುತ್ತವೆ.

ಜಾಗತಿಕ ತಾಪಮಾನ ಏರಿಕೆ ತಡೆಯಲು ಪರಿಹಾರ
          ಜನತೆ ಮತ್ತು ಸರ್ಕಾರ ಜಾಗತಿಕ ತಾಪಮಾನ ಪರಿಹಾರಗಳನ್ನು ಕಾರ್ಯಗತಗೊಳಿಸಲು ಮುಂದೆ ಬರಬೇಕಿದೆ. ಜಾಗತಿಕ ತಾಪಮಾನ ಏರಿಕೆಯನ್ನು ಕಡಿಮೆ ಮಾಡಲು ನಾವು ವಾತಾವರಣಕ್ಕೆ ಸೇರಿಸುವ ಹಸಿರುಮನೆ ಅನಿಲಗಳ ಪ್ರಮಾಣ ಕಡಿಮೆ ಮಾಡಬೇಕು. ನಾವು ಅತಿಯಾಗಿ ಬಳಸುವ ಗ್ಯಾಸೋಲಿನ್, ವಿದ್ಯುತ್ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ನಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು.

          ಗ್ಯಾಸೋಲಿನ್ ಕಡಿಮೆ ಬಳಸುವ  ಹೈಬ್ರಿಡ್ ಕಾರನ್ನು ಆಯ್ಕೆ ಮಾಡುವುದು. ಗ್ಯಾಸೋಲಿನ್ ಅನ್ನು ಕಡಿಮೆ ಬಳಸುವ ಇನ್ನೊಂದು ಮಾರ್ಗವೆಂದರೆ ಸಾರ್ವಜನಿಕ ಸಾರಿಗೆ ಅಥವಾ ಕಾರ್‌ಪೂಲ್ ಬಳಸುವುದು. ಇದು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆ ಮಾಡಲು ಮತ್ತು ವೆಚ್ಚವನ್ನು ತಗ್ಗಿಸಲು ಸಹಾಯ ಮಾಡುತ್ತದೆ.

           ಒಣ ಎಲೆಗಳನ್ನು, ಪ್ಲಾಸ್ಟಿಕ್ ಮತ್ತು ಕಸವನ್ನು ಸುಡುವುದು ನಿಲ್ಲಿಸಬೇಕು. ಪ್ಲಾಸ್ಟಿಕ್‌ನೊಂದಿಗೆ ಕಸವನ್ನು ಸುಟ್ಟರೆ ಅದು ಇಂಗಾಲದ ಡೈಆಕ್ಸೈಡ್ ಮತ್ತು ವಿಷಾನಿಲ ಬಿಡುಗಡೆ ಮಾಡುತ್ತದೆ. ಸರ್ಕಾರವು ಅರಣ್ಯನಾಶವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು.


ಉಪಸಂಹಾರ :
          ಸಂಕ್ಷಿಪ್ತವಾಗಿ ಹೇಳುವುದಾದರೆ, ನಮ್ಮ ಭೂಮಿಯು ಮೊದಲಿನಂತಿಲ್ಲ ಎಂಬ ಸತ್ಯವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಭೂಮಿಗೆ ಚಿಕಿತ್ಸೆಯ ಅಗತ್ಯವಿದೆ. ಭವಿಷ್ಯದ ಪೀಳಿಗೆಯ ಸಂಕಷ್ಟವನ್ನು ತಡೆಗಟ್ಟಲು ಜಾಗತಿಕ ತಾಪಮಾನ ಏರಿಕೆ ಕಡಿತಗೊಳಿಸುವ ಜವಾಬ್ದಾರಿಯನ್ನು ಪ್ರಸ್ತುತ ಪೀಳಿಗೆ ವಹಿಸಿಕೊಳ್ಳಬೇಕು. ಆದ್ದರಿಂದ, ಪ್ರತಿ ಹೆಜ್ಜೆ ಎಷ್ಟೇ ಸಣ್ಣದಾದರೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸುವಲ್ಲಿ ಸಾಕಷ್ಟು ಮಹತ್ವದ್ದಾಗಿದೆ.

Tuesday 26 November 2019

ಪ್ರಬಂಧ : ಮಹಿಳಾ ಸಬಲೀಕರಣ



"ಪಕ್ಷಿಗೆ ಹೇಗೆ ಒಂದೇ ರೆಕ್ಕೆಯಿಂದ ಹಾರುವುದು ಅಸಾಧ್ಯವೊ ಹಾಗೆ ಮಹಿಳೆಯರ ಸ್ಥಿತಿಗತಿಗಳು ಉತ್ತಮ ಗೊಳ್ಳದ ಹೊರತು ಜಗತ್ತಿನ ಕಲ್ಯಾಣದ ಬಗ್ಗೆ ಚಿಂತಿಸುವುದು ಅಸಾಧ್ಯ."
- ಸ್ವಾಮಿ ವಿವೇಕಾನಂದ


        ಯತ್ರ ನಾರ್ಯಸ್ತು ಪೂಜ್ಯಂತೆ ರಮಂತು ತತ್ರ ದೇವತಾ!, ತೊಟ್ಟಿಲು ತೂಗುವ ಕೈ ಜಗತ್ತನ್ನು ಆಳಬಲ್ಲದು,  ಹೆಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದೆಲ್ಲ ಹೇಳುವ ಸಮಾಜದಲ್ಲಿ ಇಂದಿಗೂ ಮಹಿಳೆ ಎರಡನೇ ದರ್ಜೆಯ ಪ್ರಜೆಯಂತಿರುವುದು ಅವಮಾನಕರ ಸಂಗತಿ. ಹೆಣ್ಣು - ತಾಯಿಯಾಗಿ, ಹೆಂಡತಿಯಾಗಿ,ಮಗಳಾಗಿ, ವಿವಿಧ ರೀತಿಯಾಗಿ ಪ್ರತಿಯೊಬ್ಬರ ಪಾಲಿನಲ್ಲಿ ಸಹಕಾರಿಣಿಯಾಗಿ ಜೀವನವಿಡಿ ಇನ್ನೊಬ್ಬರ ಬದುಕಿಗೆ ಬೆಳಕಾಗುವ ವ್ಯಕ್ತಿ.

          ಲಿಂಗ ತಾರತಮ್ಯವು ಮಾನವೀಯ ಮುಖವನ್ನು ವಿಕಾರಗೊಳಿಸಿದೆ. ಈ ತಾರತಮ್ಯವು ಹೆಣ್ಣು ಮಗುವಿನ ಜನನಕ್ಕೆ ಮುಂಚೆಯೇ ಪ್ರಾರಂಭವಾಗಿ ಅದು ಅವಳ ಹೆಣ್ಣುತನದ ಜೀವನದುದ್ದಕ್ಕೂ ಮುಂದುವರಿಯುತ್ತಿದೆ. ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಬಲೀಕರಣಕ್ಕೆ ನಾಂದಿ ಹಾಡಬೇಕಾಗಿದೆ. ಮಹಿಳೆಯರು ಇನ್ನು ಅಶಕ್ತರಿರುವುದರಿಂದಲೇ ಮಹಿಳಾ ಸಶಕ್ತೀಕರಣ  ವಿಷಯವು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅವರು ಸಶಕ್ತರಾಗುವ ತನಕ ಮುಂದುವರೆಯುತ್ತಲೇ ಇರುತ್ತದೆ.

ಮಹಿಳೆಯ ಸ್ಥಾನಮಾನಗಳು ವಿವಿಧ ಕಾಲಘಟ್ಟಗಳಲ್ಲಿ ವಿವಿಧ ರೀತಿಯಲ್ಲಿತ್ತು. ವಿವಿಧ ಕಾಲಘಟ್ಟದ ಸ್ಥಾನಮಾನ ನೋಡುವುದಾದರೆ,
  • ವೇದಗಳ ಕಾಲದಲ್ಲಿ: ಪುರಾಣಗಳಲ್ಲಿ, ವೇದ, ಉಪನಿಷತ್ತುಗಳಲ್ಲಿ ಮಹಿಳೆಗೆ 'ಮಾತಾ' ಹಾಗು 'ದೇವಿ' ಎಂಬ ಉನ್ನತ ಸ್ಥಾನ ನೀಡಿ ಪುರುಷರಿಗೆ ಸರಿಸಮಾನವಾದ ಸ್ಥಾನವನ್ನು ಕೊಡಲಾಗಿತ್ತು. ಮನುಸ್ಮುತಿಯ ದೃಷ್ಟಿಯಲ್ಲಿ ಅವಳು ಅತ್ಯಂತ ಅಮೂಲ್ಯ ಹಾಗೂ ಗೌರವಾನ್ವಿತಳಾಗಿದ್ದಳು.
  • ಮಧ್ಯಕಾಲೀನ ಭಾರತ: ಮಧ್ಯಕಾಲೀನ ಭಾರತದಲ್ಲಿ ಮಹಿಳೆಯ ಸ್ಥಿತಿಗತಿ ಚಿಂತಾಜನಕ ಸ್ಥಿತಿಯಲ್ಲಿತ್ತು. ಪರದಾ ಪದ್ದತಿ, ಸತಿಸಹಗಮನ ಪದ್ಧತಿ, ಬಹುಪತ್ನಿತ್ವ, ದೇವದಾಸಿ ಪದ್ಧತಿಗಳು, ಜೋಹಾರ್ ಪದ್ಧತಿಗಳು ಜಾರಿಯಲ್ಲಿದ್ದವು. 
  • ಆಧುನಿಕ ಭಾರತ: ಆಧುನಿಕ ಭಾರತದ ಸಮಯ ಮಹಿಳಾ ಸ್ಥಿತಿಗತಿಗಳ ಸುಧಾರಣಾ ಕಾಲವಾಯಿತು. ಮಧ್ಯಕಾಲೀನ ಭಾರತದಲ್ಲಿನ ತಪ್ಪುಗಳನ್ನು ತಿದ್ದಿ ಹಲವಾರು ಕಾಯ್ದೆ ರೂಪಿಸಿ, ಮಹಿಳಾ ಸಬಲೀಕರಣದಲ್ಲಿ ಪ್ರಗತಿ ಸಾಧಿಸಲಾಯಿತು.

ಮಹಿಳೆ - ಇಂದು: 
          ಆಧುನಿಕ  ಯುಗದಲ್ಲಿ ಗಂಡಸು ಈ ಅಮೂಲ್ಯವಾದ ಜೀವಿಯನ್ನು ಅಮೂಲ್ಯವಾದ ಸರಕನ್ನಾಗಿ ಬದಲಿಸಿ ತನ್ನ ಸ್ವಾಧೀನಪಡಿಸಿಕೊಂಡು ತನಗೆ ಬೇಕಾದ ಹಾಗೆ ಉಪಯೋಗಿಸಿಕೊಂಡು ನಂತರ ಬಿಟ್ಟು ಬಿಟ್ಟ. ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಯಂದ ದೂರವಿಡಲಾಯಿತು. ಇಂದಿನ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆಗಳನ್ನು ಗಮನಿಸುವುದಾದರೆ,
  1. ವರದಕ್ಷಿಣೆ: ಮದುವೆಯು ಒಂದು ವ್ಯಾಪಾರವಾಗಿ ಬಿಟ್ಟಿದೆ. ಇದು ವರನಿಗೆ ಲಾಭಕರವಾದರೆ ವಧುವಿನ ಕಡೆಯವರಿಗೆ ಖರ್ಚಿನದ್ದಾಗಿರುತ್ತದೆ. ವಧುವು ಅಪಾರ ಪ್ರಮಾಣದ ವರದಕ್ಷಿಣೆ ಕೊಡಬೇಕಾತ್ತದೆ. ವರದಕ್ಷಿಣೆ ತರದ ಹೆಣ್ಣು ಮಕ್ಕಳನ್ನು ಗಂಡನ ಮನೆಯವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕೊಡುತ್ತಾರೆ ಮತ್ತೆ ಕೆಲವೊಮ್ಮೆ ಈ ಲೋಕದಿಂದಲೇ ಇಲ್ಲವಾಗಿಸಿ ಬಿಡುತ್ತಾರೆ. 
  2. ಅತ್ಯಾಚಾರ: ರಾಷ್ಟ್ರೀಯ ಮಹಿಳಾ ಅಯೋಗ & ಮಹಿಳಾ ಹಕ್ಕುಗಳ  ಆಯೋಗದ ವರದಿಯ ಪ್ರಕಾರ ಮಹಿಳೆಯರ ವಿರುದ್ದದ ಅಪರಾಧಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ,ಅತ್ಯಾಚಾರ ಪ್ರಕರಣಗಳು ಮಹಿಳೆಯರ ವಿರುದ್ಧ ಹೆಚ್ಚುತ್ತಿವೆ, ಅಪ್ರಾಪ್ತ ಬಾಲಕಿಯರು ಇದಕ್ಕೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಇದಕ್ಕೆ ಬಲಿಯಾದ ಹೆಣ್ಣು ಮಕ್ಕಳು ಬಹಳ ವೇದನೆ ಅನುಭವಿಸುತ್ತಾರೆ. ಇವರು ಕಾನೂನಿನ ಅಮಾನವೀಯ & ಅಸಭ್ಯ ವಿಚಾರಣೆಗೆ ಅವರ ನೈತಿಕ ಸ್ಟೈರ್ಯವನ್ನು ಕುಗ್ಗುತ್ತದೆ. 
  3. ಬಾಲ್ಯ ವಿವಾಹ: ಭಾರತೀಯ ಸಮಾಜದ ಮತ್ತೊಂದು ಅನಿಷ್ಟ ಪದ್ದತಿ ಎಂದರೆ ಬಾಲ್ಯ ವಿವಾಹ. ಹುಡುಗಿಯು ಶಾಲೆಗೆ ಹೋಗಿ ತನ್ನ ಪುಸ್ತಕ & ಗೆಳತಿಯರೊಂದಿಗೆ ಆಟವಾಡಿಕೊಂಡಿರುವ ಸಮಯದಲ್ಲಿ ಅವಳು ಮದುವೆಯಾಗುವಂತೆ ಒತ್ತಾಯಿಸಲ್ಪಡುತ್ತಾಳೆ. ಬಾಲಕಿಯು ತಾಯಿಯಾಗುವುದಕ್ಕೆ ಮಾನಸಿಕವಾಗಿ & ದೈಹಿಕವಾಗಿ ತಯಾರಾಗಿಲ್ಲದಿರುವಾಗ ತಾಯಿಯಾಗಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯಾಗುವುದರಿಂದ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ವೇಳೆ ಆ ಬಾಲಕಿಯ ಸಾವು ಕೂಡ ಸಂಭವಿಸುತ್ತದೆ. 
  4. ಶಿಶು ಹತ್ಯೆ: ಹೆಣ್ಣು ಶಿಶುವಿನ ಜನನವನ್ನು ಒಂದು ರೀತಿಯಲ್ಲಿ ಕೀಳೆಂದು ಪರಿಗಣಿಸಲಾಗುತ್ತಿದೆ. ನವಜಾತ ಹೆಣ್ಣು ಶಿಶುವಿನ ಅಳುವಿನ ಜೊತೆಗೆ ಇಡೀ ಕುಟುಂಬ ಅಳಲು ಪ್ರಾರಂಭಿಸುತ್ತದೆ. ಹೊಟ್ಟೆಯಲ್ಲಿರುವ ಮಗು ಹೆಣ್ಣೆಂದು ತಿಳಿದ ಕೂಡಲೇ ಅದು ಈ ಜಗತ್ತಿಗೆ ಬರುವ ಮೊದಲೇ ಆ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲಾಗುತ್ತದೆ. ಜೀವ ಉಳಿಸುವಲ್ಲಿ ದೇವರ ನಂತರದ ಸ್ಥಾನ ಹೊಂದಿರುವ ವೈದ್ಯರುಗಳು ವಿಜ್ಞಾನ & ತಂತ್ರಜ್ಞಾನದ ದುರುಪಯೋಗ ಪಡೆದು ಹಣಕ್ಕಾಗಿ ಲಿಂಗ ಪತ್ತೆ ಹಚ್ಚಿ ಹೆಣ್ಣು ಶಿಶುಗಳ ಮರಣಕ್ಕೆ ಕಾರಣರಾಗುತ್ತಿದ್ದಾರೆ. ಗಂಡು ಮಗುವಿನ ಬಯಕೆ ಜನಸಂಖ್ಯೆಯ ಸಮತೋಲನ ಕಾಯ್ದುಕೊಳ್ಳಲು ತೊಡಕಾಗಿದೆ. 
  5.  ಹೆಣ್ಣು ಮಕ್ಕಳ ಅಶ್ಲೀಲತೆಯ ಪ್ರದರ್ಶನ & ಅನೈತಿಕವಾಗಿ ಮಾರಾಟ ಮಾಡುವುದರ ಮೂಲಕ ಹೆಣ್ಣು ಮಕ್ಕಳನ್ನು ವ್ಯಾಪಾರೀಕರಣಗೊಳಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ & ಗುಡ್ಡಗಾಡು ಜನಾಂಗದ ಅಪ್ರಾಪ್ತ ಬಾಲಕಿಯರನ್ನು ಮಾರಾಟ ಮಾಡಿ ವೇಶ್ಯೆಯರನ್ನಾಗಿ ಮಾಡಲಾಗುತ್ತಿದೆ.

ಸಬಲೀಕರಣದ ಹೆಜ್ಜೆ 
          ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸಿದ ಅನೇಕ ಮಹನೀಯರ ಬಗ್ಗೆ ತಿಳಿದು ಬರುತ್ತದೆ, ಅವರಲ್ಲಿ ಪ್ರಮುಖರಾದವರೆಂದರೆ, ಬುದ್ಧ, ಆದಿ ಶಂಕರಾಚಾರ್ಯ, ಬಸವಣ್ಣ, ರಾಜಾರಾಮ ಮೋಹನ್ ರಾಯ್ ,ಈಶ್ವರ್ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ, ಮಹತ್ಮಾಗಾಂಧಿ ಮುಂತಾದವರು ಇವರಲ್ಲದೆ ಬ್ರಿಟಿಷ್ ಸರ್ಕಾರವು ಕೂಡ ಮಹಿಳೆಯರ ಸಶಕ್ತೀಕರಣಕ್ಕೆ ಕೆಲವೊಂದು ಕಾನೂನುಗಳನ್ನು ಜಾರಿಗೆ ತಂದಿತು.  ಆದರೆ ಕಾನೂನಿನಿಂದ ಮಾತ್ರ  ಮಹಿಳಾ ಸಬಲೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಸ್ವಂತ ತಾವೇ ಮುಂದೆ ಬಂದು ಯಾವುದೇ ಜಾತಿ, ಧರ್ಮ ಎಂದು ಭೇದ ಮಾಡದೇ ತಮ್ಮ ಸಶಕ್ತೀಕರಣದ ಕಡೆಗೆ ಒಗ್ಗಟ್ಟಾಗಿ ಮುಂದೆ ಸಾಗಬೇಕು.

          ಸಾಮಾನ್ಯ ಮಹಿಳೆಯರು ಈಗಾಗಲೇ ಸಶಕ್ತೀಕರಣಗೊಂಡು ಮಹತ್ವದ ಸಾಧನೆ ಮಾಡಿದ ಮಹಿಳೆಯರಿಂದ ಪ್ರಭಾವಿತರಾಗಿ ಅವರ ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಬೇಕು. ಇಂತಹ ಪ್ರಭಾವಿ ದಿಟ್ಟ ಮಹಿಳೆಯರಲ್ಲಿ ಪ್ರಮುಖರಾದವರೆಂದರೆ ಭಾರತದ ಪ್ರಥಮ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಪ್ರಥಮ ಮಹಿಳಾ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್, ನೊಬೆಲ್ ಶಾಂತಿ ಪುರಸ್ಕಾರ ಪಡೆದ ಸಮಾಜ ಸೇವಕಿ ಮದರ್ ತೆರೇಸಾ, ಸರೋಜಿನಿ ನಾಯ್ಡು, ಪ್ರಥಮ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಲಾನಿ, ಪ್ರಥಮ ಮಹಿಳಾ ಐ.ಪಿ.ಎಸ್ ಅಧಿಕಾರಿ ಕಿರಣ್ ಬೇಡಿ , ಗಗನ ಯಾತ್ರಿ ಕಲ್ಪನಾ ಚಾವ್ಲಾ , ಮೀನಾಕುಮಾರಿ, ಲತಾ ಮಂಗೇಷ್ಕರ್‌,  ಸುಷ್ಮ ಸ್ವರಾಜ್, ಉಮಾಭಾರತಿ ಮುಂತಾದವರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಸಂವಿಧಾನದಲ್ಲಿನ ಪೂರಕ ಅಂಶಗಳು
ಸ್ತ್ರೀಯರ ಸ್ಥಾನಮಾನ ಸುಧಾರಿಸುವ ದಿಟ್ಟ ಹೆಜ್ಜೆಗಳನ್ನು ಭಾರತದ ಸಂವಿಧಾನದ ಮೂಲಕ ಶಾಸನಾತ್ಮಕ, ಶೈಕ್ಷಣಿಕ, ಕಾನೂನಾತ್ಮಕ ಬೆಂಬಲವನ್ನು ನೀಡಲಾಯಿತು. ಸಂವಿಧಾನದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು
  • ವಿಧಿ-14 ಕಾನೂನಿನ ಮುಂದೆ ಎಲ್ಲರೂ ಸಮಾನರು.
  • ವಿಧಿ-15 ಜಾತಿ, ಲಿಂಗ, ಹುಟ್ಟಿದ ಸ್ಥಳ, ಬೇದಭಾವ ಮಾಡಬಾರದು.
  • ವಿಧಿ-16 ಸಾರ್ವಜನಿಕ ಹುದ್ದೆಯಲ್ಲಿ ಸಮಾನ ಅವಕಾಶ.
  • ಚುನಾವಣೆಗೆ ಸ್ಪರ್ಧಿಸುವ ಹಕ್ಕು.
ಇವುಗಳನ್ನು ಪಡೆದು ಸಬಲರಾಗುವುದು ಮಹಿಳೆಯರ ಆದ್ಯ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಿ ಪಡೆಯುವ ಹಕ್ಕುಗಳೇ ಹೆಚ್ಚು.

ಇತರೆ ಕ್ಷೇತ್ರಗಳಲ್ಲಿ ಮಹಿಳೆಯ ಸಬಲೀಕರಣ
          ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು.ಮಕ್ಕಳನ್ನು ಹೆರುವುದು ಅವುಗಳ ಲಾಲನೆ, ಪಾಲನೆ ಮಾಡುವುದು & ಕುಟುಂಬವನ್ನು ನೋಡಿಕೊಳ್ಳುವುದು ಮಾತ್ರ ಅವಳ ಕೆಲಸವಾಗಿತ್ತು, ಆದರೆ ಈಗ ಕಾಲ ಬದಲಾಗುತ್ತಿದೆ. ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ & ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು. ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ & ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಬೆಳೆದಿದ್ದಾಳೆ. ಈಗ ಮಹಿಳೆಯರು ಸಂಘಟಿತ, ಅಸಂಘಟಿತ, ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಹಾಗೂ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ.

ಮಹಿಳಾ ಸಬಲೀಕರಣದಲ್ಲಿ ಸರ್ಕಾರ ಮತ್ತು ಸಮಾಜದ ಪಾತ್ರ

          ಕರ್ನಾಟಕದಲ್ಲಿ ಸ್ತ್ರೀ ಶಕ್ತಿ ಯೋಜನೆ ಮತ್ತು  ಉದ್ಯೋಗದಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ. 2001ನೇ ವರ್ಷವನ್ನು ಮಹಿಳಾ ಸಶಕ್ತೀಕರಣ ವರ್ಷ” ಎಂದು ಘೋಷಿಸಲಾಗಿದೆ. ಮಹಿಳೆಯರ ಸಶಕ್ತೀಕರಣದಲ್ಲಿ ರಾಜಕೀಯ ಪಕ್ಷಗಳಿಗಿಂತ ಸ್ವಯಂ ಸೇವಾ ಸಂಸ್ಥೆಗಳೇ ಬಹಳಷ್ಟು ಮಹತ್ವದ ಪಾತ್ರ ವಹಿಸಿವೆ.

          ಮಹಿಳೆಯರು ಸುರಕ್ಷತೆ ಮತ್ತು  ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ , ಭೌದ್ದಿಕ, ಶೈಕ್ಷಣಿಕ, ಮಾನಸಿಕ ಹಾಗು ದೈಹಿಕವಾಗಿ ಸಶಕ್ತಗೊಳ್ಳುವ ಅಗತ್ಯ ಇದೆ. ಮಹಿಳೆಯರ ಸುರಕ್ಷತೆಗೋಸ್ಕರ ಹಲವಾರು ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಈ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿಲ್ಲ. ಕಾನೂನುಗಳನ್ನು ಯಾವುದೇ ಪಕ್ಷಪಾತವಿಲ್ಲದೇ ಸಮರ್ಪಕವಾಗಿ ಜಾರಿಗೆ ಬರುವ ತನಕ ಮಹಿಳೆಯರ ವಿರುದ್ಧದ ಅಪರಾಧಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಮಹಿಳೆಯರ ವಿರುದ್ದದ ಸಾವಿರಾರು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದೆ. ಎಷ್ಟೋ ಪ್ರಕರಣಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕೈಬಿಡಲಾಗಿದೆ. ಅನೇಕ ಪ್ರಕರಣಗಳು ದೀರ್ಘಕಾಲ ನಡೆಯುತ್ತಿವೆ. ನಮ್ಮ ಕಾನೂನುಗಳಲ್ಲಿಯ ಕೆಲವೊಂದು ಲೋಪಗಳಿಂದಾಗಿ ಆರೋಪಿಗಳು ಪಾರಾಗುತ್ತಿದ್ದಾರೆ. ಈ ಕಾನೂನುಗಳನ್ನು ಸರಿಪಡಿಸಬೇಕಾಗಿದೆ ಮತ್ತು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ. ಮಹಿಳೆಯರಿಗೆ ಹಿಂಸೆ ಕೊಡುವವರಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕಾಗಿದೆ. ಅತ್ಯಾಚಾರಿಗಳಿಗೆ ಕೊಲೆಗಡುಕರಿಗೆ ಮರಣ ದಂಡನೆಯನ್ನು ವಿಧಿಸಬೇಕು. ಮಹಿಳೆಯರಿಗೆ ಶಿಕ್ಷಣ & ಆರೋಗ್ಯ ಸೌಲಭ್ಯಗಳು ಸುಲಭವಾಗಿ ದೊರೆಯಬೇಕು. ಪುರುಷರೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಒಳ್ಳೆಯ ಶಿಕ್ಷಣ & ಉದ್ಯೋಗಾವಕಾಶಗಳು ಮಹಿಳೆಯರ ಮನೋಸ್ಥೆರ್ಯವನ್ನು ಹೆಚ್ಚಿಸುತ್ತದೆ. ಪುರುಷ ಸಮಾಜವು ಮಹಿಳೆಯನ್ನು ಜೀವನದ ಅವಿಭಾಜ್ಯ ಅಂಗವೆಂದು ಒಪ್ಪಿಕೊಳ್ಳಬೇಕು. 

ಉಪಸಂಹಾರ:
          ಮಹಿಳಾ ಸಬಲೀಕರಣ ಕೇವಲ ಸರ್ಕಾರದ ಹೊಣೆಯಲ್ಲ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಹೊಣೆಯಾಗಿದೆ. ಸಮಾಜವನ್ನು ಜಾಗೃತಗೊಳಿಸಬೇಕಾದರೆ ಮೊದಲು ಮಹಿಳೆಯನ್ನು ಜಾಗೃತಗೊಳಿಬೇಕು. ಒಂದು ಸಲ ಮಹಿಳೆ ಪ್ರಗತಿ ಪಥದಲ್ಲಿ ಚಲಿಸಲು ಪ್ರಾರಂಭಿಸಿದರೆ ಇಡೀ ಕುಟುಂಬ ಹಳ್ಳಿ & ಸಂಪೂರ್ಣ ದೇಶದ ಪ್ರಗತಿಯಾಗುತ್ತದೆ. ಆದ್ದರಿಂದ ಮಹಿಳೆಯರ ಸಬಲೀಕರಣ ದೇಶದ ಪ್ರಗತಿಗೆ ಅತ್ಯವಶ್ಯವಾಗಿದೆ.

Monday 25 November 2019

ಪ್ರಬಂಧ: ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರಗಳು






             ಭಾರತ ಕೃಷಿ ಪ್ರಧಾನ ದೇಶ. ಕೃಷಿಯನ್ನು ಭಾರತದಲ್ಲಿ ಪ್ರಾಥಮಿಕ ವಲಯವೆಂದು ಪರಿಗಣಿಸಲಾಗುತ್ತದೆ, ಅಂದರೆ ಕೃಷಿ ಆರ್ಥಿಕತೆಯು ಪ್ರಾಬಲ್ಯಯುತ ವಲಯವಾಗಿದೆ. ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ಕ್ಷೇತ್ರಗಳು ಶೀಘ್ರ ದರದಲ್ಲಿ ಬೆಳೆಯುತ್ತಿವೆ, ಆದರೂ ಇನ್ನೂ ಬಹುಪಾಲು ಭಾರತೀಯರು ಕೃಷಿಯನ್ನು ಅವಲಂಬಿಸಿದ್ದಾರೆ. ಜನಸಂಖ್ಯೆಯ 70% ಕ್ಕಿಂತಲೂ ಹೆಚ್ಚು ಜನರು ಇನ್ನೂ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. 

          ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯು ಕೃಷಿ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿದೆ. ಏಕೆಂದರೆ ಆರ್ಥಿಕ ಬೆಳವಣಿಗೆಯ ದರಗಳನ್ನು ಸಾಧಿಸಲು, ಮೊದಲು ಆರ್ಥಿಕತೆಯ ಪ್ರಮುಖ ವಲಯದ ಬೆಳವಣಿಗೆಯ ದರವನ್ನು ಸುಧಾರಿಸುವುದು ಮುಖ್ಯವಾಗಿದೆ. ಮೊದಲ ಪಂಚವಾರ್ಷಿಕ ಯೋಜನೆಯಿಂದ ಭಾರತದ ಗಮನವು ಕೃಷಿಯ ಮೇಲೆಯೇ ಇದೆ. ಭಾರತದಲ್ಲಿ ಕೃಷಿ ವಲಯದ ಅಭಿವೃದ್ಧಿಗೆ ಕಾರಣವಾದ ಹಸಿರು ಕ್ರಾಂತಿಗೆ ಧನ್ಯವಾದವನ್ನು ಹೇಳಲೆಬೇಕು. ಭಾರತವು ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ, ಭಾರತವು ದೈನಂದಿನ ಬಳಕೆಗಾಗಿ ಆಹಾರ ಧಾನ್ಯಗಳನ್ನು ಸಹ ಆಮದು ಮಾಡಿಕೊಳ್ಳಬೇಕಾದ ದಿನಗಳು ಕಳೆದುಹೋಗಿವೆ. ಭಾರತೀಯ ಕೃಷಿ ತಾಂತ್ರಿಕವಾಗಿ ಪ್ರಗತಿಗೊಳ್ಳುತ್ತಿದೆ.  ಭಾರತದಲ್ಲಿನ ಕೃಷಿ ಪ್ರವೃತ್ತಿಗಳಲ್ಲಿ ಒಟ್ಟಾರೆಯಾಗಿ ಸುಧಾರಣೆಯಾಗಿದೆ.

ಮೇಲಿನ ಅಂಶಗಳ ಮೇಲ್ನೋಟದ ವಿಶ್ಲೇಷಣೆಯು ಭಾರತದಲ್ಲಿ ಕೃಷಿ ಕ್ಷೇತ್ರ ಆಶಾದಾಯಕವಾಗಿದೆ ಎಂದು ಹೇಳಲು ಪ್ರೇರೇಪಿಸುತ್ತದೆ. ಆದರೆ ಸತ್ಯವು ಅದರಿಂದ ದೂರವಿದೆ. ಎಲ್ಲಾ ಬೆಳವಣಿಗೆ ಮತ್ತು ಅಭಿವೃದ್ಧಿಯ ಹಿಂದೆ ಭಾರತೀಯ ರೈತರು ಎದುರಿಸಬೇಕಾದ ಸಮಸ್ಯೆಗಳ ವಾಸ್ತವವಿದೆ - ತೀವ್ರ ಬಡತನ ಮತ್ತು ಆರ್ಥಿಕ ಬಿಕ್ಕಟ್ಟು ಅವರನ್ನು ಆತ್ಮಹತ್ಯೆಗೆ ದೂಡುತ್ತಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಘೋರ ಪ್ರಕರಣಗಳು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ.


ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿರುವ ಸಮಯದಲ್ಲಿ, ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಗಂಭೀರ ಸಮಸ್ಯೆಗಳು ಯಾವುವು? ಎನ್ನುವುದನ್ನು ಗಮನಿಸುವುದಾದರೆ,


  • ಆರ್ಥಿಕ ಕಾರಣಗಳು:- ರೈತ ಸಾಂಸ್ಥಿಕ ಮೂಲಗಳಿಂದ ಸಾಲ ಪಡೆಯದೆ, ಲೇವಾದೇವಿಗಾರರು ಹಾಗೂ ಬಡ್ಡಿ ವ್ಯಾಪಾರಿಗಳಿಂದ ಸಾಲವನ್ನು ಹೆಚ್ಚಿನ ಬಡ್ಡಿ ದರದಲ್ಲಿ ತಂದು ಅದನ್ನು ತೀರಿಸಲಾಗದೇ ತಾನೇ ತೀರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕೃಷಿಯಿಂದ ಬರುವ ಆದಾಯ ಅಲ್ಪವಾಗಿದ್ದು, ಅವನ ಜೀವನ ನಿರ್ವಹಣೆಯ ಖರ್ಚು ಹೆಚ್ಚಾಗಿದೆ. ಇದರಿಂದ ರೈತ ಸಮಸ್ಯೆಗೆ ಸಿಲುಕಿದ್ದಾನೆ.
  • ನೈಸರ್ಗಿಕ ಕಾರಣಗಳು:-  ಮನುಷ್ಯ ಇಂದು ತನ್ನ ಅಪರಿಮಿತ ಬಯಕೆಗಳನ್ನು ತೀರಿಸಿಕೊಳ್ಳಲು ನಿಸರ್ಗಕ್ಕೆ ಸವಾಲೆಸೆಯುತ್ತಿದ್ದಾನೆ. ಅದಕ್ಕೆ ಪ್ರತಿಕಾರವೆಂಬಂತೆ ಅತಿಯಾದ ಮಳೆ, ಅತಿಯಾದ ಬೇಸಿಗೆ ಬರುವ ಮೂಲಕ ರೈತನ ಬೆಳೆ ಸರ್ವನಾಶವಾಗುತ್ತಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ. ರೈತನ ಜೀವನ ಮಳೆಯೊಂದಿಗೆ ಆಡುವ ಜೂಜಾಟವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬರದೆ ರೈತ ಹಾಕಿದ ಬಂಡವಾಳ ಮಣ್ಣು ಪಾಲಾಗುತ್ತದೆ.
  • ಸಾಮಾಜಿಕ ಕಾರಣಗಳು:- ರೈತ ಧಾರ್ಮಿಕ ಆಚರಣೆಗಳನ್ನು, ಅದ್ದೂರಿ ಮದುವೆಗಳನ್ನು, ಹಬ್ಬ ಹರಿದಿನಗಳನ್ನು ಮಾಡಲು ದುಂದುವೆಚ್ಚ ಮಾಡುತ್ತಾನೆ. ಇಲ್ಲಿ ಮಾಡಿದ ವೆಚ್ಚಕ್ಕೆ ಯಾವುದೇ ಪ್ರತಿಫಲ ಇರುವುದಿಲ್ಲ. ಮಾಡಿದ ಸಾಲ ಮರುಪಾವತಿಯಾಗದೇ, ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾನೆ.
  • ಕೃಷಿ ಮೂಲಸೌಕರ್ಯಗಳ ಕೊರತೆ:- ರೈತ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಲಭ್ಯವಿಲ್ಲದಿರುವಿಕೆ. ದಿನದ 24 ಗಂಟೆ ವಿದ್ಯುತ್ ಅಲಭ್ಯತೆ. ಕಳಪೆ ಬೀಜಗಳು, ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ, ವ್ಯವಸ್ಥಿತ ಸಾರಿಗೆಯ ಕೊರತೆ ಇದರಿಂದಾಗಿ ರೈತನ ಉತ್ಪಾದನೆಯು ಕಡಿಮೆಯಾಗುತ್ತಿದೆ. ಉತ್ಪಾದನೆ ಮಾಡಿದ ಇಳುವರಿಗೆ ಯೋಗ್ಯ ಬೆಲೆ ದೊರಕದೆ ರೈತನ ಜೀವನವೇ ಅಯೋಗ್ಯವಾಗುತ್ತಿದೆ.
  • ಇತರೆ ಕಾರಣಗಳು: ರೈತ ಇಂದು ಬೆಳೆಯುತ್ತಿರುವ ಬೆಳೆಗಳು ಬೇಗನೆ ಕೆಟ್ಟು ಹೋಗುವಂತವುಗಳಾಗಿವೆ. ಉದಾ: ಹಣ್ಣು ಮತ್ತು ತರಕಾರಿ, ಫಸಲು ಬಂದು ಕೆಲವೇ ದಿನಗಳಲ್ಲಿ ಮಾರಾಟವಾಗದಿದ್ದರೆ ಅವು ಸಂಪೂರ್ಣ ಕೆಟ್ಟು ಹೋಗುತ್ತವೆ. ವರ್ಷಾನುಗಟ್ಟಲೇ ರೈತ ಮಾಡಿದ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಸಾಲ ಮಾಡಿ ರೈತ ಬೆಳೆ ಬೆಳೆದಿರುತ್ತಾನೆ. ಆದರೆ ಸಾಲ ತೀರಿಸಲಾಗದೆ ಶೂಲಕ್ಕೆ ಏರಬೇಕಾಗುತ್ತದೆ. ರೈತರಲ್ಲಿ ಇರುವ ದುಶ್ಚಟಗಳಾದ ಮಧ್ಯಪಾನ, ಜೂಜು  ಹೆಚ್ಚಾಗಿದೆ ಮತ್ತು ಅದರಿಂದ ಬರುವ ರೋಗ ರುಜಿನಗಳಿಂದ ಮುಕ್ತವಾಗಲು ಹಣ ವ್ಯಯಿಸುತ್ತಾನೆ. ಕೃಷಿ ಮೂಲದಿಂದ ಬರುವ ಉತ್ಪಾದನೆಗೆ ರೈತನಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ.  ಕೃಷಿಕರಿಗೆ ಪರ್ಯಾಯ ಕೆಲಸಗಳು ಕಡಿಮೆಯಾಗಿವೆ.  ನಿರುದ್ಯೋಗದಿಂದ ಬಡತನ, ಬಡತನದಿಂದ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ರೈತ ಬರುತ್ತಿದ್ದಾನೆ.


ರೈತರ ಆತ್ಮಹತ್ಯೆ ತಡೆಗೆ ಪರಿಹಾರೋಪಾಯಗಳು:
ರೈತರ ಆತ್ಮಹತ್ಯೆ ತಡೆಯಲು ಇಂದು ತಕ್ಷಣದ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ.ಕೆಲವು ಪರಿಹಾರೋಪಾಯಗಳನ್ನು ನೋಡುವುದಾದರೆ, 


  • ರೈತರಿಗೆ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಮೂಲಕ ಸುಲಭವಾಗಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿ ಲೇವಾದೇವಿಗಾರರ ಕಿರುಕುಳವನ್ನು ತಪ್ಪಿಸಬೇಕು.
  • ರೈತರಿಗೆ ಅಧುನಿಕ ಬೇಸಾಯದ ಕುರಿತು ಮಾಹಿತಿ ನೀಡುವ ಮೂಲಕ ಫಸಲಿನ ಗುಣಮಟ್ಟ ಮತ್ತು ಪ್ರಮಾಣದ ಹೆಚ್ಚಳಕ್ಕೆ ಆದ್ಯತೆ ನೀಡಬೇಕು.
  • ರೈತರ ದುಶ್ಚಟಗಳ ನಿರ್ಮೂಲನೆಗಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಮೂಲಕ ಕುಟುಂಬದ ಪ್ರಗತಿಗೆ ಸಹಕರಿಸಬೇಕು.
  • ರೈತರು ಕೃಷಿ ಜೊತೆಗೆ ಇತರ ಉಪ ಕಸುಬುಗಳನ್ನು ಕೈಗೊಳ್ಳಲು ಸರ್ಕಾರ ಸಹಾಯಧನ ಮತ್ತು ಸೂಕ್ತ ತರಬೇತಿ ನೀಡಬೇಕು.
  • ಕೃಷಿಗೆ ಪೂರಕ ಮೂಲಸೌಕರ್ಯಗಳಾದ ಗುಣಮಟ್ಟದ ಸಾರಿಗೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ನೀರಾವರಿ ವ್ಯವಸ್ಥೆ, ಗುಣಮಟ್ಟದ ಬೀಜಗಳ ವಿತರಣೆ, ರಸಗೊಬ್ಬರಗಳ ಲಭ್ಯತೆ ಇರುವಂತೆ ಮಾಡಲು ಸರ್ಕಾರ ಕಾರ್ಯಪ್ರವೃತ್ತವಾಗಬೇಕು.
  • ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸರ್ಕಾರ ನಿಗದಿಪಡಿಸಬೇಕು ಮತ್ತು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು.
  • ಸರ್ಕಾರ ಜಾರಿಗೆ ತಂದಿರುವ ವಿಮಾ ಯೋಜನೆಗಳ ಕುರಿತು ತಿಳುವಳಿಕೆ ನೀಡಿ ರೈತರಿಂದ ಬೆಳೆ ವಿಮೆ ಮಾಡಿಸಬೇಕು. ಪ್ರಕೃತಿ ವಿಕೋಪಗಳಿಂದ ರೈತರಿಗೆ ನಷ್ಟವಾದಾಗ ವಿಮಾ ಕಂಪನಿಗಳು ರೈತನಿಗೆ ಪರಿಹಾರ ಒದಗಿಸಿಕೊಡುತ್ತವೆ.

ಈ ಮೇಲೆ ತಿಳಿಸಿದ ಎಲ್ಲಾ ಕ್ರಮಗಳ ಸರ್ಕಾರ ಹಾಕಿಕೊಂಡಿದ್ದರೂ ಅವುಗಳ ಪರಿಣಾಕಾರಿ ಜಾರಿಯಲ್ಲಿ ಕೊರತೆ ಕಂಡುಬರುತ್ತಿದೆ. ಯೋಜನೆಗಳು ಅನುಷ್ಠಾನಕ್ಕೆ ಬಂದರೆ ರೈತರ ಆತ್ಮಹತ್ಯೆ ತಡೆಯಲು ಸಾಧ್ಯಾವಾಗಬಹುದು.


ಉಪಸಂಹಾರ:
"ಒಬ್ಬ ಮನುಷ್ಯನಿಗೆ ಒಂದು ಮೀನು ಕೊಡಿ, ಅವನು ಒಂದು ದಿನ ತಿನ್ನುತ್ತಾನೆ, ಆದರೆ ಅದೇ ಮೀನು ಹಿಡಿಯುವುದು ಹೇಗೆ ಎಂದು ಕಲಿಸಿದರೆ, ಅವನು ತನ್ನ ಜೀವನದುದ್ದಕ್ಕೂ ತಿಂದು ಬದುಕುತ್ತಾನೆ" ಎಂಬ ಜನಪ್ರಿಯ ಮಾತಿನಂತೆ  ಸರ್ಕಾರ ಮತ್ತು ಜನಪ್ರತಿನಿಧಿಗಳು ಸಾಲಮನ್ನಾ ಎಂಬ ಕಣ್ಣೊರೆಸುವ ತಂತ್ರವನ್ನು ಬಿಟ್ಟು ರೈತನ ಸಂಕಷ್ಟವನ್ನು ಅರಿತು ಅವನು ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿದಾಗ ಮಾತ್ರ “ಜೈ ಜವಾನ್ ಜೈ ಕಿಸಾನ್” ಘೋಷಣೆಗೆ ಅರ್ಥ ಬಂದತ್ತಾಗುತ್ತದೆ.

Click here to Download pdf file 

Sunday 24 November 2019

ಪ್ರಬಂಧ : ಭಯೋತ್ಪಾದನೆ




ಭಯೋತ್ಪಾದನೆ ಎಂಬ ಪದವನ್ನು ಕೇಳಿದರೆ ಸಾಕು ಮನದಲ್ಲಿ ಭಯ ಆವರಿಸುತ್ತದೆ. ಭಯೋತ್ಪಾದನೆ ಎಂಬ ಪದದಲ್ಲಿಯೇ ಅದರ ಅರ್ಥ ಅಡಗಿದ್ದು, ಭಯೋತ್ಪಾದನೆ ಎಂದರೆ ಭಯದ ಉತ್ಪಾದನೆ  ಎಂದರ್ಥವಾಗುತ್ತದೆ. 

ಭಯೋತ್ಪಾದನೆಯು ಕಾನೂನುಬಾಹಿರ ವಿಧಾನಗಳಿಂದ ಸಾಮಾನ್ಯ ಜನರಲ್ಲಿ ಭಯವನ್ನು ಉಂಟುಮಾಡುವ ಗುರಿಯನ್ನು ಹೊಂದಿದೆ. ಇದು ಮಾನವೀಯತೆಗೆ ಅಪಾಯವಾಗಿದ್ದು ಹೇಡಿತನದ ಕಾರ್ಯವಾಗಿದೆ. ಇದು ಹಿಂಸಾಚಾರ, ಗಲಭೆ, ಕಳ್ಳತನ, ಅತ್ಯಾಚಾರ, ಅಪಹರಣ, ಬಾಂಬ್ ಸ್ಫೋಟಗಳು ಇತ್ಯಾದಿಗಳ ಮೂಲಕ ಭಯ ಹರಡುವ ವ್ಯಕ್ತಿ ಅಥವಾ ಗುಂಪನ್ನು ಒಳಗೊಂಡಿದೆ. ಭಯೋತ್ಪಾದನೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಭಯೋತ್ಪಾದಕ ಕೇವಲ ಭಯೋತ್ಪಾದಕ, ಹಿಂದೂ ಅಥವಾ ಮುಸ್ಲಿಂ ಅಲ್ಲ.

ಭಯೋತ್ಪಾದನೆ ಪದವು ಇಂಗ್ಲಿಷ್ ನ "TERRORISM" ಎಂಬ ಪದಕ್ಕೆ ಸಮಾನವಾದದ್ದು. ಇಂಗ್ಲಿಷ್ ನ TERRORISM ಎಂಬ ಪದವು ಲ್ಯಾಟಿನ್ ಭಾಷೆಯ"  ಟೆರೆರೆ"  ಎಂಬ ಪದದಿಂದ ಬಂದಿದೆ.   ಟೆರೆರೆ ಎಂದರೆ ಭಯಹುಟ್ಟಿಸು ಎಂದರ್ಥ.

ಭಯೋತ್ಪಾದನೆಯ ವ್ಯಾಖ್ಯಾನಗಳು
"ಸಂಘಟಿತ ಸಮೂಹವು ಘೋಷಿತ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಹಿಂಸಾಚಾರದ ಕ್ರಮಬದ್ಧ ಚಟುವಟಿಕೆಗಳನ್ನು ಅನುಸರಿಸುವುದೇ ಭಯೋತ್ಪಾದನೆ "

"ರಾಜಕೀಯ ಉದ್ದೇಶದಿಂದ ಕೂಡಿರುವ ಸಾಮೂಹಿಕ ಸ್ವರೂಪದ ಹಿಂಸಾಚಾರವೇ ಭಯೋತ್ಪಾದನೆ. "

"ಭಯೋತ್ಪಾದನೆಯು ಮುಗ್ಧ ಜನರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಇಡಿ ಜನಸಮುದಾಯದಲ್ಲಿ ಭಯವನ್ನು ಹುಟ್ಟಿಸುವುದಾಗಿದೆ ಹಾಗೂ ಇದು ರಾಜಕೀಯ ಪ್ರೇರಿತವಾಗಿರುತ್ತದೆ. "

ಭಯೋತ್ಪಾದನೆಗೆ ಕಾರಣಗಳು

  • ತ್ವರಿತ ಜನಸಂಖ್ಯಾ ಬೆಳವಣಿಗೆ
  • ರಾಜಕೀಯ, ಸಾಮಾಜಿಕ, ಆರ್ಥಿಕ ಸಮಸ್ಯೆಗಳು
  • ಸಾಮಾಜಿಕ ಜಾಗೃತಿ ಇಲ್ಲದಿರುವುದು
  • ದೇಶದ ವ್ಯವಸ್ಥೆಯಲ್ಲಿ ಜನರ ಅಸಮಾಧಾನ
  • ಅಂಧ ಧಾರ್ಮಿಕ, ಜಾತಿ ನಂಬಿಕೆಗಳು
  • ಅನ್ಯಧರ್ಮದ ಬಗ್ಗೆ ಸಹನೆ ಇಲ್ಲದಿರುವುದು
  • ರಾಜಕೀಯ  ಉದ್ದೇಶ ಈಡೇರಿಕೆ
  • ಭ್ರಷ್ಟಾಚಾರ
  • ವರ್ಣಭೇದ ನೀತಿ
  • ಆರ್ಥಿಕ ಅಸಮಾನತೆ
  • ಭಾಷಾ ವ್ಯತ್ಯಾಸಗಳು
  • ನಿರುದ್ಯೋಗ
  • ದುಡ್ಡಿನ ಆಮಿಷ
  • ಪೋಷಕರ ನಿರ್ಲಕ್ಷ್ಯ
  • ಬಡತನ

ಭಯೋತ್ಪಾದನೆಯ ವಿವಿಧ ಆಯಾಮಗಳು

  • ಬಾಂಬ್ ಸ್ಪೋಟ
  • ಸಾಮೂಹಿಕ ಹತ್ಯೆ ನಡೆಸುವುದು
  • ರಾಜಕೀಯ ವ್ಯಕ್ತಿಗಳ ಅಪಹರಣ
  • ಸಂಪತ್ತನ್ನು ದೋಚುವುದು
  • ಲೈಂಗಿಕ ಶೋಷಣೆ 
  • ಒತ್ತೆಯಾಳುಗಳನ್ನಾಗಿಸುವುದು

ಭಯೋತ್ಪಾದನೆಯ ಪರಿಣಾಮಗಳು
ಭಯೋತ್ಪಾದನೆ ಜನರಲ್ಲಿ ಭಯವನ್ನು ಹರಡುತ್ತದೆ.  ಭಯೋತ್ಪಾದಕ ದಾಳಿಯಿಂದಾಗಿ, ಲಕ್ಷಾಂತರ ಸರಕುಗಳು ನಾಶವಾಗುತ್ತವೆ, ಸಾವಿರಾರು ಮುಗ್ಧ ಜನರ ಪ್ರಾಣ ಕಳೆದುಹೋಗುತ್ತದೆ, ಪ್ರಾಣಿಗಳು ಸಹ ಕೊಲ್ಲಲ್ಪಡುತ್ತವೆ. ಭಯೋತ್ಪಾದಕ ಚಟುವಟಿಕೆಯನ್ನು ನೋಡಿದ ನಂತರ ಮಾನವೀಯತೆಯ ಮೇಲಿನ ಅಪನಂಬಿಕೆ ಹುಟ್ಟುತ್ತದೆ, ಇದು ಇನ್ನೊಬ್ಬ ಭಯೋತ್ಪಾದಕನಿಗೆ ಜನ್ಮ ನೀಡುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ವಿವಿಧ ರೀತಿಯ ಭಯೋತ್ಪಾದನೆ ಅಸ್ತಿತ್ವದಲ್ಲಿದೆ. ಭಯೋತ್ಪಾದನೆಯ ಪರಿಣಾಮಗಳನ್ನು ಪಟ್ಟಿ ಮಾಡುವುದಾದರೆ,

  • ಆಸ್ತಿ ಹಾನಿ
  • ಹಿಂಸಾಚಾರ
  • ಸಮಾಜದಲ್ಲಿ ಆತಂಕ
  • ಪ್ರಾಣ ಹಾನಿ
  • ಕೋಮುಗಲಭೆ
  • ಪ್ರಜಾಪ್ರಭುತ್ವಕ್ಕೆ ಆಶಯಕ್ಕೆ ಹಾನಿ
  • ಸರ್ಕಾರ ದುರ್ಬಲಗೊಳ್ಳುವುದು
  • ಜಾಗತಿಕ ಯುದ್ದಗಳಿಗೆ ಬುನಾದಿ
  • ರಾಷ್ಟ್ರೀಯ ಭಾವೈಕ್ಯತೆ ಧಕ್ಕೆ
  • ಅಭಿವೃದ್ಧಿ ಕುಂಠಿತಗೊಳ್ಳುವಿಕೆ

ಭಾರತದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ಸಂಸ್ಥೆಗಳು
ಭಾರತದಲ್ಲಿ ಅನೇಕ ಪೊಲೀಸ್, ಗುಪ್ತಚರ ಮತ್ತು ಮಿಲಿಟರಿ ಸಂಸ್ಥೆಗಳು ಮತ್ತು ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ವಿಶೇಷ ಸಂಸ್ಥೆಗಳಿವೆ.

  • ಭಯೋತ್ಪಾದನಾ ನಿಗ್ರಹ ದಳ (ATS)
  • ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) 
  • ರಾಷ್ಟ್ರೀಯ ತನಿಖಾ ಸಂಸ್ಥೆ (NIA)

ಪರಿಹಾರ ಕ್ರಮಗಳು

  • ಭಯೋತ್ಪಾದಕರ ಅಡಗು ತಾಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ನಾಶಪಡಿಸುವುದು
  • ಜನರಲ್ಲಿ ಐಕ್ಯತೆ ಬಗ್ಗೆ ಜಾಗೃತಿ ಮೂಡಿಸುವುದು
  • ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು
  • ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವುದು
  • ಸೂಕ್ತ ತರಬೇತಿ ಪಡೆದ ನುರಿತ ಸೈನಿಕರನ್ನು ನೇಮಿಸಿಕೊಳ್ಳುವುದು
  • ಸಾರ್ವಜನಿಕ ಸ್ಥಳಗಳಿಗೆ ಹಾಗೂ ಗಣ್ಯವ್ಯಕ್ತಿಗಳಿಗೆ ಭದ್ರತೆ ಕಲ್ಪಿಸುವುದು



ಉಪಸಂಹಾರ:
ಭಯೋತ್ಪಾದನೆ ಜಾಗತಿಕ ಬೆದರಿಕೆಯಾಗಿ ಮಾರ್ಪಟ್ಟಿದೆ, ಇದನ್ನು ಆರಂಭಿಕ ಹಂತದಿಂದ ನಿಯಂತ್ರಿಸಬೇಕಾಗಿದೆ. ಭಯೋತ್ಪಾದನೆಯನ್ನು ಕಾನೂನು ಜಾರಿ ಸಂಸ್ಥೆಗಳಿಂದ ಮಾತ್ರ ನಿಯಂತ್ರಿಸಲಾಗುವುದಿಲ್ಲ. ಭಯೋತ್ಪಾದನೆ ನಿಗ್ರಹ ದಿನ - ಮೇ 21 ರಂದು ಪ್ರತಿ ವರ್ಷ ಭಾರತದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಭಯೋತ್ಪಾದನೆ ನಿಗ್ರಹದ ಕುರಿತು ಚರ್ಚೆ, ವಿಚಾರ ಸಂಕಿರಣ ನಡೆಯುತ್ತಿದೆ. ಹೆಚ್ಚುತ್ತಿರುವ ಈ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ವಿಶ್ವದ ಜನರು ಒಂದಾಗಿ ಹೋರಾಡಬೇಕು.

Click here to Download pdf file